ಚಾಮರಾಜನಗರ: ಇಂದು ಜಿಲ್ಲೆಯಲ್ಲಿ ಹೊಸದಾಗಿ 47 ಕೋವಿಡ್ ಪಾಸಿಟಿವ್ ಕೇಸ್ ಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 2,316ಕ್ಕೆ ಏರಿಕೆಯಾಗಿದೆ ಹಾಗೂ ಕೋವಿಡೇತರ ಕಾರಣದಿಂದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
ಚಾಮರಾಜನಗರದ ಕರಿನಂಜನಪುರದ 81 ವರ್ಷದ ವೃದ್ಧ ಅನಾರೋಗ್ಯ ಕಾರಣದಿಂದಾಗಿ ಜಿಲ್ಲಾಸ್ಪತ್ರೆಗೆ ಕಳೆದ 28 ರಂದು ದಾಖಲಾಗಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಾವಿನ ಬಳಿಕ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ 46 ಮಂದಿ ಮೃತಪಟ್ಟಿದ್ದಾರೆ.
ಇಂದು 20 ಮಂದಿ ಗುಣಮುಖರಾಗಿ ಮನೆಗೆ ಮರಳುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 470 ರಷ್ಟಾಗಿದೆ. ಐಸಿಯುನಲ್ಲಿ ದಾಖಲಾದವರ ಸಂಖ್ಯೆ 15ಕ್ಕೆ ಇಳಿಕೆಯಾಗಿದ್ದು, 175 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. ಇನ್ನೂ 671 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಈವರೆಗೆ 1800 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಪೈಕಿ 191 ಮಂದಿ ಹೋಂ ಐಸೋಲೇಷನ್ ನಲ್ಲಿದ್ದವರಾಗಿದ್ದಾರೆ.