ಚಾಮರಾಜನಗರ: ಕೊರೊನಾ ಎರಡನೇ ಅಲೆಯ ಅಬ್ಬರ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು ನಿನ್ನೆ 469 ಮಂದಿಗೆ ಸೋಂಕು ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,596ಕ್ಕೆ ಏರಿಕೆಯಾಗಿದೆ.
308 ಮಂದಿ ಗುಣಮುಖರಾಗಿದ್ದಾರೆ. 49 ಮಂದಿ ಐಸಿಯುನಲ್ಲಿದ್ದು, 1,715 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. 5,628 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
8 ಮಂದಿ ಸಾವು:
ಕೊರೊನಾ ಸೋಂಕಿತರ ಸಾವಿನ ಸರಣಿ ಮುಂದುವರೆದಿದ್ದು 5 ಮಂದಿ ಯುವಕರು, ಮೂವರು ವೃದ್ಧರು ಸೇರಿ 8 ಮಂದಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 159 ತಲುಪಿದೆ.
ಜಿಲ್ಲಾ ಕೇಂದ್ರಾದ್ಯಂತ ಸ್ಯಾನಿಟೈಸೇಷನ್:
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರಾದ್ಯಂತ ಚಾಮರಾಜನಗರ ನಗರಸಭೆ ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತಿದೆ. ಅಗ್ನಿಶಾಮಕ ವಾಹನ ಹಾಗೂ ನಗರಸಭೆ ವಾಹನಗಳನ್ನು ಬಳಸಿಕೊಂಡು ಚಾಮರಾಜನಗರದ 31 ವಾರ್ಡ್‌ಗಳಲ್ಲೂ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ.
ಸೋಂಕು ದೃಢಪಟ್ಟ ಮನೆಗಳು, ಜನನಿಬಿಡ ಸ್ಥಳಗಳಾದ ಮಾರುಕಟ್ಟೆ, ಬೀದಿಬದಿ ವ್ಯಾಪಾರದ ಸ್ಥಳಗಳು, ಹೋಟೆಲ್ ಹಾಗೂ ಖಾಸಗಿ ಕ್ಲಿನಿಕ್ ಸುತ್ತಮುತ್ತಲೂ ದಿನಕ್ಕೊಮ್ಮೆ ಸೋಂಕು ನಿವಾರಣ ದ್ರಾವಣ ಸಿಂಪಡಿಸಲಾಗುತ್ತಿದೆ.
ನಗರಸಭೆ ಅಧ್ಯಕ್ಷೆ ಹಾಗೂ ಆಯುಕ್ತರ ನೇತೃತ್ವದಲ್ಲಿ ಈ ಸ್ಯಾನಿಟೈಸೇಷನ್ ಕಾರ್ಯ ನಡೆಸಲಾಗುತ್ತಿದೆ. ಜೊತೆಗೆ, ಅಗತ್ಯ ವಸ್ತುಗಳ ಮಾರಾಟದ ಅವಧಿ ಮುಗಿದ ಬಳಿಕ ಮಳಿಗೆಗಳಿಗೆ ಸ್ಯಾನಿಟೈಸೇಷನ್ ಮಾಡಲು ಮುಂದಾಗಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದವರ ವಿರುದ್ಧ ದಂಡ ಪ್ರಯೋಗವೂ ನಡೆಯುತ್ತಿದೆ.