ಚಾಮರಾಜನಗರ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸುವವರು ಇನ್ನಾದರೂ ಎಚ್ಚರಿಕೆಯಿಂದ ಇರುವುದು ಅಗತ್ಯ. ಏಕೆಂದರೆ, ಕಳೆದ ಮೂರು ವರ್ಷಗಳಲ್ಲಿ ಅಪಘಾತದಲ್ಲಿ ಮೃತಪಟ್ಟವರ ಅಂಕಿ-ಅಂಶ ಗಮನಿಸಿದರೇ ಖಂಡಿತಾ ಬೆಚ್ಚಿ ಬೀಳುತ್ತೀರಿ.
ಹೌದು...ಕಳೆದ 3 ವರ್ಷಗಳಲ್ಲಿ ಅಂದರೆ 2019 ರಿಂದ 2021ರ ನವೆಂಬರ್ ಮಾಸಾಂತ್ಯದವರೆಗೆ ಜರುಗಿದ ಅಪಘಾತಗಳಲ್ಲಿ 438 ಮಂದಿ ಬಲಿಯಾಗಿದ್ದು, 1571 ಅಪಘಾತ ಪ್ರಕರಣಗಳು ದಾಖಲಾಗಿವೆ. ಸವಾರರು ಜಾಗರೂಕತೆಯಿಂದ ವಾಹನ ಚಲಾಯಿಸದಿದ್ದರೆ ಸಾವು ಖಚಿತ ಎನ್ನುವುದನ್ನು ಇದು ಸ್ಪಷ್ಟಪಡಿಸುತ್ತದೆ.
ಜಿಲ್ಲೆಯ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಮತ್ತು ರಸ್ತೆಗಳಲ್ಲಿ 2019ರಿಂದ 2021ರ ನವೆಂಬರ್‌ವರೆಗೆ ಸಂಭವಿಸಿರುವ ಅಪಘಾತಗಳಲ್ಲಿ ಒಟ್ಟು 438 ಜನ ಸಾವನ್ನಪ್ಪಿದ್ದಾರೆ. ಬರೋಬ್ಬರಿ 2,067 ಜನರು ಗಾಯಗೊಂಡಿದ್ದಾರೆ. 2019ರಲ್ಲಿ 589 ಅಪಘಾತ ಪ್ರಕರಣಗಳು, 148 ಜನ ಸಾವು, 883 ಜನರಿಗೆ ಗಾಯಾಳುಗಳಾಗಿದ್ದಾರೆ. 2020ರಲ್ಲಿ 531 ಅಪಘಾತ ಪ್ರಕರಣಗಳು, 157 ಜನ ಸಾವು, 700 ಜನರಿಗೆ ಗಾಯಗಳಾಗಿವೆ. 2021ರಲ್ಲಿ 397 ಅಪಘಾತ ಪ್ರಕರಣಗಳು, 133 ಜನ ಸಾವು, 484 ಜನರಿಗೆ ಪೆಟ್ಟುಬಿದ್ದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲೇ ಹೆಚ್ಚು ಅಪಘಾತ:
ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳು ಯಮಲೋಕದ ಹೆದ್ದಾರಿಗಳಾಗಿಬಿಟ್ಟಿವೆ. ಏಕೆಂದರೆ ಈ ರಸ್ತೆಗಳಲ್ಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಚಾಮರಾಜನಗರದಿಂದ ತಮಿಳುನಾಡಿನ ಸತ್ತಿಗೆ ಹೋಗುವ ರಸ್ತೆಯಲ್ಲಿ ಆಗಿಂದಾಗ್ಗೆ ಅಪಘಾತಗಳು ನಡೆಯುತ್ತಲೇ ಇರುತ್ತವೆ.
ಜಿಲ್ಲಾ ಪೊಲೀಸ್ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ 2019ರಿಂದ ಇಲ್ಲಿಯವರೆಗೆ 218 ಜನ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. 2021ರ ಜನವರಿಯಿಂದ ನ.26ರವರೆಗೆ ಮಾರಣಾಂತಿಕ ಗಾಯಗಳಾಗಿರುವ 56 ಪ್ರಕರಣಗಳು ಮತ್ತು ಮಾರಣಾಂತಿಕವಲ್ಲದ 122 ಮೊಕದ್ದಮೆಗಳಲ್ಲಿ 63 ಜನ ಮೃತಪಟ್ಟಿದ್ದಾರೆ. 206 ಜನರಿಗೆ ಗಾಯಗಳಾಗಿವೆ. ರಾಜ್ಯ ಹೆದ್ದಾರಿಯಲ್ಲಿ 30 ಜನ ಸತ್ತಿದ್ದು, 158 ಜನರಿಗೆ ಪೆಟ್ಟುಬಿದ್ದಿದೆ. ಇತರ ರಸ್ತೆಗಳಲ್ಲಿ 40 ಸಾವು ಸಂಭವಿಸಿವೆ. 120 ಜನರಿಗೆ ಗಾಯಗಳಾಗಿವೆ.
ಸರ್ಕಾರಿ ಬಸ್‌ಗಳಿಗೆ ಹೀಗೆ ಪದೇ ಪದೆ ಸಿಕ್ಕಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೂ ಜಿಲ್ಲೆಯಲ್ಲಿ ಹೆಚ್ಚಿದೆ. 2019ರಲ್ಲಿ 14 ಜನ, 2020ರಲ್ಲಿ 3 ಜನ, 2021ರಲ್ಲಿ 7 ಜನ ಮೃತಪಟ್ಟಿದ್ದಾರೆ.