ಚಾಮರಾಜನಗರ : ಬೇರೆ ಬೇರೆ ಜಾತಿ ಬಿಡಿ, ಸ್ವಂತ ಅಣ್ಣ ತಮ್ಮಂದಿರೇ ಆಸ್ತಿ ಪಾಲು ಮಾಡಿಕೊಂಡು ವಾಸಿಸುವವರ ನಡುವೆ ಮೂರು ಧರ್ಮದವರು ಒಟ್ಟಿಗೆ ಕೃಷಿ ಮಾಡಿಕೊಂಡು ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. 'ಭಾರತ ಎಂದರೆ, ಭಾವೈಕ್ಯತೆ' ಎಂಬುದಕ್ಕೆ ನಿದರ್ಶನವಾಗಿರುವ ಅಪರೂಪದ ಸ್ಟೋರಿಯೊಂದು ಇಲ್ಲಿದೆ ನೋಡಿ.
ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ನಾಲ್ವರು ಸ್ನೇಹಿತರು ಒಟ್ಟಿಗೆ ಕೃಷಿ ಮಾಡಿಕೊಂಡು ಒಂದೇ ಮನೆಯಲ್ಲಿ ವಾಸ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದಾರೆ.
ಒಂದೇ ಮನೆಯಲ್ಲಿ ವಾಸವಿರುವುದಷ್ಟೇ ಅಲ್ಲದೇ ಈ ನಾಲ್ವರು ಮೂರು ಧರ್ಮಗಳ ಹಬ್ಬಗಳನ್ನು ಆಚರಿಸುತ್ತಾರೆ. ಒಬ್ಬರ ಆಚರಣೆಯನ್ನು ಮತ್ತೊಬ್ಬರು ಗೌರವಿಸುತ್ತಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕೇರಳದ ಅಲೆಪ್ಪಿಯ ಕ್ರೈಸ್ಥ ಧರ್ಮದ ಜೀಜೊ, ಮೇಲಾಟ್ಟೂರಿನ ಮುಸ್ಲಿಂ ವ್ಯಕ್ತಿ ಅಬ್ದುಲ್ ಕರೀಂ, ಮಲ್ಲಪುರಂನ ಹಿಂದೂ ವ್ಯಕ್ತಿ ರಾಜೀವ್ ಹಾಗೂ ಮುಸ್ಲಿಂ ಧರ್ಮದ ಅಬುಲೇಶ್ ಎಂಬ ನಾಲ್ವರು ಸ್ನೇಹಿತರು ಕುಲಗಾಣ ಗ್ರಾಮದಲ್ಲಿ 16 ಎಕರೆ ಜಮೀನನ್ನು ಗುತ್ತಿಗೆ ಪಡೆದು ಕಳೆದ 3 ವರ್ಷಗಳಿಂದ ರೇಷ್ಮೆ ಕೃಷಿ ನಡೆಸುತ್ತಿದ್ದಾರೆ. ರೇಷ್ಮೆಯಂತೇ ಇವರ ಧರ್ಮ, ಭಾವೈಕ್ಯತೆಯೂ ಹೊಳೆಯುತ್ತಿದೆ.
ಭಾವೈಕ್ಯತೆ ಬೆಸೆದ ಕೃಷಿ : ಈ ನಾಲ್ವರು ಈ ಹಿಂದೆ ವಿದೇಶಗಳಲ್ಲಿ ಕೆಲಸ ಮಾಡಿ ಕೃಷಿ ಸೆಳೆತದಿಂದಾಗಿ ಒಂದಾಗಿದ್ದಾರೆ. ಜಿಜೋ ಎಂಜಿನಿಯರ್ ಆಗಿ ಇಂಗ್ಲೆಂಡ್ನಲ್ಲಿ ಕಾರ್ಯ ನಿರ್ವಹಿಸಿದ್ದು, ಉಳಿದ ಮೂವರು ಬಿಎ ಪದವಿ ಪಡೆದು ಸೌದಿ ಅರೇಬಿಯಾ ರಾಷ್ಟ್ರಗಳಲ್ಲಿ ನೌಕರಿ ಮಾಡಿಕೊಂಡಿದ್ದರು. ಬಳಿಕ ವ್ಯವಸಾಯದತ್ತ ಮುಖ ಮಾಡಿದ್ದಾರೆ.
ಒಬ್ಬರಿಂದ ಒಬ್ಬರಿಗೆ ಪರಿಚಯಗೊಂಡ ಈ ನಾಲ್ವರು ಒಟ್ಟಾಗಿ "MILK or SILK" ಎಂಬುದರಲ್ಲಿ ನಂಬಿಕೆಯಿಟ್ಟು ತಲಾ 20 ಲಕ್ಷ ರೂ. ಬಂಡವಾಳ ಹೂಡಿ ಕುಲಗಾಣ ಗ್ರಾಮದಲ್ಲಿ ರೇಷ್ಮೆ ಕೃಷಿ ನಡೆಸುತ್ತಿದ್ದಾರೆ. ಕೆವಿಕೆ ವಿಜ್ಞಾನಿಗಳು, ರೇಷ್ಮೆ ಇಲಾಖೆ ಅಧಿಕಾರಿಗಳ ಸಲಹೆ-ಸೂಚನೆ ಪಡೆದು ವರ್ಷಕ್ಕೆ 7 ಬ್ಯಾಚ್ನಂತೆ 1200-1500 ರೇಷ್ಮೆ ಹುಳು ಸಾಕುತ್ತಿದ್ದು, ಲಾಭಗಳಿಸುತ್ತಿದ್ದಾರೆ.
ಒಂದೇ ಮನೆ.. ಮೂರು ಧರ್ಮ-ಮೂರು ರಾಜಕೀಯ ಪಕ್ಷ : ಈ ಸ್ನೇಹಿತರು ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದು, ರಜಾ ದಿನಗಳಲ್ಲಿ ನಾಲ್ವರು ಸ್ನೇಹಿತರ ಕುಟುಂಬ ವರ್ಗ ಒಟ್ಟಾಗಿ ಹಬ್ಬಗಳನ್ನು ಆಚರಿಸುತ್ತಾರೆ. ರಂಜಾನ್ ವೇಳೆಯಲ್ಲಿ ನಾಲ್ವರು ಉಪವಾಸ ಇರಲಿದ್ದು, ಈಸ್ಟರ್‌ನಲ್ಲಿ ತಮ್ಮಿಚ್ಛೆಯ ಊಟ, ಹವ್ಯಾಸಗಳನ್ನು ತ್ಯಜಿಸುತ್ತಾರೆ. ಅದರಂತೆ, ಓಣಂ ಹಬ್ಬವನ್ನೂ ಕುಟುಂಬದೊಟ್ಟಿಗೆ ಆಚರಿಸುತ್ತಾರೆ.
ಇವರ ವಿಭಿನ್ನತೆಯಲ್ಲಿ ಏಕತೆ ಇಷ್ಟಕ್ಕೆ ನಿಲ್ಲುವುದಿಲ್ಲ. ನಾಲ್ವರು ಸ್ನೇಹಿತರಲ್ಲಿ ಒಬ್ಬರು ಸಿಪಿಐ ರಾಜಕೀಯ ಪಕ್ಷದ ಬೆಂಬಲಿಗ, ಮತ್ತೊಬ್ಬರು ಬಿಜೆಪಿ ಹಾಗೂ ಇನ್ನಿಬ್ಬರು ಕಾಂಗ್ರೆಸ್ ಪಾರ್ಟಿಯ ಕಟ್ಟಾಳುಗಳಾಗಿದ್ದು, ಅವರರವರ ರಾಜಕೀಯ ಆಲೋಚನೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ವಾದ ಮಾಡುತ್ತಾರೆ ಬಳಿಕ ಎಲ್ಲವನ್ನೂ ಮರೆತು ಒಟ್ಟಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತೇವೆ ಎಂದು ನಗುತ್ತಲೇ ಹೇಳುತ್ತಾರೆ ನಾಲ್ವರಲ್ಲಿ ಒಬ್ಬರಾದ ರಾಜೀವ್.
ಕೆಲಸದಾಳುಗಳ ಜತೆಗೆ ಭಿನ್ನತೆ ತೋರದೆ ಬೆರೆಯುತ್ತಾರೆ : ಈ ನಾಲ್ವರನ್ನೂ ಒಗ್ಗೂಡಿಸಿರುವುದು ಕೃಷಿ. ವ್ಯವಸಾಯದ ಮೇಲಿನ ಒಲವಿಗೆ ಒಂದಾದ ಈ ನಾಲ್ವರು 'ನೇಗಿಲ ಧರ್ಮದ ಮುಂದೆ ಮತ್ತೀನ್ನಾವ ಧರ್ಮದ ಹಂಗಿಲ್ಲ' ಎಂಬುದನ್ನು ಸಾರುತ್ತಿದ್ದಾರೆ. ಈಶಾನ್ಯ ರಾಜ್ಯದಿಂದ ನಾಲ್ವರು, ಶಿವಮೊಗ್ಗ ಮತ್ತು ಗುಂಡ್ಲುಪೇಟೆಯ ಇಬ್ಬರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದು, ಯಜಮಾನ-ನೌಕರನೆಂದು ನೋಡದೆ ಅವರೊಂದಿಗೆ ಆಟಗಳನ್ನು ಆಡುತ್ತಾರೆ, ಮೀನು ಹಿಡಿಯುತ್ತಾರೆ, ತಿಂಗಳಿಗೊಮ್ಮೆ ಗೂಡು ಮಾರಾಟವಾದ ಬಳಿಕ ಅವರೊಟ್ಟಿಗೆ ಕುಳಿತು ಪಾರ್ಟಿ ಮಾಡುವ ಮೂಲಕ ಹಣ, ಅಂತಸ್ತು, ಜಾತಿ-ಧರ್ಮ ಎಲ್ಲವನ್ನೂ ಮೀರಿ ನಿಂತಿದ್ದಾರೆ.
ಧರ್ಮ ಅಡ್ಡ ಬಂದಿಲ್ಲ : ನಾವೆಲ್ಲರೂ ದುಡಿಯುತ್ತಿರುವುದು ಎರಡು ಹೊತ್ತು ಊಟ, ಉತ್ತಮ ಜೀವನಕ್ಕಾಗಿ. ನಮ್ಮ ನಡುವೆ ಯಾವ ಧರ್ಮವೂ ಅಡ್ಡ ಬಂದಿಲ್ಲ. ನಾವು ನಾಲ್ವರು ಒಟ್ಟಾಗಿ ಮೂರು ಧರ್ಮಗಳ ಹಬ್ಬವನ್ನು ಆಚರಿಸುತ್ತೇವೆ. ಎಲ್ಲರಿಗೂ ಒಳಿತಾಗಲೆಂದು ಮೂರು ಧರ್ಮಗಳ ದೇವರನ್ನೂ ಪ್ರಾರ್ಥಿಸುತ್ತೇವೆ ಎನ್ನುತ್ತಾರೆ ನಾಲ್ವರಲ್ಲಿ ಒಬ್ಬರಾದ ಜಿಜೋ.
ಇದನ್ನೂ ಓದಿ: ಹೆಚ್.ಆರ್. ಕೇಶವಮೂರ್ತಿಗೆ ಪದ್ಮಶ್ರೀ ಪ್ರಶಸ್ತಿ.. ಗಮಕ ಕಲಾವಿದ ನಡೆದು ಬಂದ ಹಾದಿ..