ಚಾಮರಾಜನಗರ : ಎರಡು ರಾಜ್ಯಗಳ ಗಡಿ ಹಂಚಿಕೊಂಡಿರುವ ಚಾಮರಾಜನಗರದಲ್ಲಿ 2021ರಲ್ಲಿ ನಡೆದ ಭಾರೀ ಕಹಿ ಘಟನೆ ಎಂದರೆ ಅದು ಕೊರೊನಾ ರೋಗಿಗಳಿಗೆ ಆಮ್ಲಜನಕ ಪೂರೈಕೆಯಲ್ಲಾದ ಅವಘಡ. ಇದಲ್ಲದೇ ರಾಜಕೀಯ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆ ಸೇರಿದಂತೆ ಹಲವಾರು ಘಟನೆಗಳು ಜಿಲ್ಲೆಯ ಜನರ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿವೆ. ಈ ವರ್ಷ(2021) ಜಿಲ್ಲೆಯಲ್ಲಿ ಏನೆಲ್ಲಾ ನಡೆಯಿತು ಎಂಬುದರ ಪಕ್ಷಿನೋಟ ಇಲ್ಲಿದೆ.
ಕೊರೊನಾ ಸ್ಫೋಟ, ಆಮ್ಲಜನಕ ದುರಂತ
ಕೊರೊನಾ ಮೊದಲನೇ ಅಲೆಯಲ್ಲಿ ತಿಂಗಳುಗಟ್ಟಲೇ ಜಿಲ್ಲೆ ಹಸಿರು ವಲಯದಲ್ಲಿ ಕಾಣಿಸಿಕೊಂಡು ಇಡೀ ದೇಶದ ಗಮನ ಸೆಳೆದಿತ್ತು. ಆದರೆ, 2ನೇ ಅಲೆಯ ವೇಳೆ ಜಿಲ್ಲೆಯಲ್ಲಿ ಕೊರೊನಾ ಸ್ಫೋಟಗೊಂಡು ದಿನವೊಂದಕ್ಕೆ ಗರಿಷ್ಠ 450 ಜನರು ಸೋಂಕಿಗೆ ಒಳಗಾಗಿ ಕರಾಳ ಛಾಯೆ ತೆರೆದಿಟ್ಟಿತ್ತು.
ಮೇ ತಿಂಗಳಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯ ಕೋವಿಡ್ ರೋಗಿಗಳಿಗೆ ಸಮರ್ಪಕ ಆಮ್ಲಜನಕ ಪೂರೈಕೆಯಾಗದೇ 24 ಮಂದಿ ಅಸುನೀಗಿದ್ದರು. ಇದು ಇಡೀ ದೇಶದಲ್ಲೇ ಕಪ್ಪುಚುಕ್ಕೆಯಾಗಿದೆ. ಕೊರೊನಾ ನಿರ್ವಹಣೆಯಲ್ಲಿ ಜಿಲ್ಲಾಡಳಿತ, ಸರ್ಕಾರ ಎಡವಿದ್ದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಇಬ್ಬರು ಡಿಸಿಗಳ ಬಹಿರಂಗ ಕೆಸರೆರಚಾಟಕ್ಕೆ ಈ ದುರಂತ ಸಾಕ್ಷಿಯಾಯಿತು.
ಆಸ್ಪತ್ರೆ ಉದ್ಘಾಟನೆ, ಜಾನಪದ ಅಕಾಡೆಮಿ ಪ್ರಶಸ್ತಿ, ಹಕ್ಕಿಹಬ್ಬ
450 ಹಾಸಿಗೆ ಸಾಮರ್ಥ್ಯದ ನೂತನ ಜಿಲ್ಲಾಸ್ಪತ್ರೆಯನ್ನು ರಾಷ್ಟಪತಿ ರಾಮನಾಥ್ ಕೋವಿಂದ್ ಉದ್ಘಾಟನೆ ಮಾಡುವ ಮೂಲಕ ಇದು ಜನರ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವಾಯಿತು. ಇದರೊಟ್ಟಿಗೆ, ನಗರದಲ್ಲಿ ನಡೆದ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಲ್ಲಿನ ಸೋಬಾನೆ ಕಲಾವಿದೆ ಹೊನ್ನಮ್ಮ ಅಕಾಡೆಮಿ ಪ್ರಶಸ್ತಿ ಪಡೆದಿರುವುದು ಜಿಲ್ಲೆಗೆ ದಕ್ಕಿದ ಶ್ರೇಯವಾಗಿದೆ.
7ನೇ ಆವೃತ್ತಿಯ ಕರ್ನಾಟಕ ಹಕ್ಕಿ ಹಬ್ಬ ಈ ಬಾರಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದು ನೂರಾರು ಪಕ್ಷಿಪ್ರೇಮಿಗಳು ಬರ್ಡ್ ಸಫಾರಿ ನಡೆಸಿದ್ದು ವಿಶೇಷವಾಗಿತ್ತು. ಜೊತೆಗೆ, 20 ವರ್ಷದ ಬಳಿಕ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪಕ್ಷಿ ಗಣತಿ ನಡೆದು 289 ಪ್ರಬೇಧಗಳನ್ನು ಪತ್ತೆ ಹಚ್ಚಲಾಯಿತು.
ಬಿಳಿಗಿರಿರಂಗನ ದರ್ಶನ, ಮಾದಪ್ಪನಿಗೆ ಬೆಳ್ಳಿ ಕಣ್ಣು ಕೊಟ್ಟ ಎಸ್ಎಂಕೆ
ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥನ ದೇವಾಲಯ ಜೀರ್ಣೋದ್ಧಾರ ನಡೆದು 4 ವರ್ಷಗಳ ಬಳಿಕ ಭಕ್ತರಿಗೆ ರಂಗಪ್ಪ ದರ್ಶನ ಕೊಟ್ಟ. ಸಂಪ್ರೋಕ್ಷಣಾ ಕಾರ್ಯಕ್ರಮದಲ್ಲಿ ಈ ಹಿಂದೆ ಬೆಟ್ಟದಲ್ಲಿ ಕಾರ್ಯನಿರ್ವಹಿಸಿದ್ದ ಮುಸ್ಲಿಂ ಅಧಿಕಾರಿ ಮುಜೀಬ್ ಪಾಲ್ಗೊಂಡು, ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಹನೂರು ತಾಲೂಕಿನ ಮಲೆಮಹದೇಶ್ವರನಿಗೆ ಮಾಜಿ ಸಿಎಂ ಎಸ್ಎಂ ಕೃಷ್ಣ 1110 ಕೆಜಿ ತೂಕದ ಬೆಳ್ಳಿ ಕಣ್ಣುಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದರು. ಇದೇ ದೇವಾಲಯದಲ್ಲಿ ದೇವತಾ ಉತ್ಸವ ಮೂರ್ತಿಯ ಚಿನ್ನದ ಕರಡಿಗೆ ನಾಪತ್ತೆಯಾಗಿ ಬಳಿಕ ತ್ಯಾಜ್ಯದಲ್ಲಿ ಸಿಕ್ಕಿದ್ದ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಚಾಮರಾಜನಗರದ ಚಾಮರಾಜೇಶ್ವರನಿಗೆ ಮಹಾರಾಜರ ಬಳಿಕ ಬೆಂಗಳೂರೂರಿನ ಅರುಣ್ ಸುಬ್ರಹ್ಮಣ್ಯ ಎಂಬುವರು 5.5 ಕೆಜಿ ಬೆಳ್ಳಿ ಕೊಳಗ ಕೊಟ್ಟು ಭಕ್ತಿ ಮೆರೆದಿದ್ದರು.
ರಾಷ್ಟ್ರಪತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ
ಈ ವರ್ಷ ರಾಷ್ಟ್ರಪತಿ ಪುರಸ್ಕಾರಕ್ಕೆ ಚಾಮರಾಜನಗರ ಗ್ರಾಮಾಂತರ ಬಿ.ಪುಟ್ಟಸ್ವಾಮಿ ಅವರಿಗೆ ರಾಷ್ಟ್ರಪತಿ ಪದಕ. ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಶಿಕ್ಷಕ ಕೆ.ಎಸ್.ಮಹಾದೇವಸ್ವಾಮಿ ಅವರ ಧೂಪದ ಮಕ್ಕಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ. ರಾಮಸಮುದ್ರದ ಮಲ್ಲೇಗೌಡರ ಗೊರವರ ಕುಣಿತದ ಕಲೆಗೆ ಜಾನಪದ ಲೋಕ ಪ್ರಶಸ್ತಿ, ನಾರದ ಮತ್ತು ಕೃಷ್ಣನ ಪಾತ್ರದಲ್ಲಿ ಮಿಂಚುತ್ತಿದ್ದ ನಗರದ ವೆಂಕಟರಮಣಸ್ವಾಮಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿದೆ. ಚಾಮರಾಜನಗರದ ಸ್ನೇಹಾ ಹಾಗೂ ರಚನಾ ವಾಕೋಡೆ ಮಿಸ್ ಮೈಸೂರು ಕಿರೀಟ ಧರಿಸಿದರು.
ರಾಜಕೀಯ ಪಲ್ಲಟ- ಉಸ್ತುವಾರಿ ಸಚಿವ ಬದಲು
ಬಿಎಸ್ಪಿಯಿಂದ ಉಚ್ಚಾಟನೆಗೊಂಡಿದ್ದ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಬಿಜೆಪಿಗೆ ಸೇರ್ಪಡೆಗೊಂಡು ಗಮನ ಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಿಕ್ಷಣ ಖಾತೆ ಹೊಂದಿದ್ದ ಸುರೇಶ್ ಕುಮಾರ್ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ತಪ್ಪಿಸಿಕೊಂಡರು. ಬಳಿಕ ಸಚಿವ ಎಸ್.ಟಿ.ಸೋಮಶೇಖರ್ ಉಸ್ತುವಾರಿ ವಹಿಸಿಕೊಂಡರು.
ಜಿಲ್ಲೆಯಲ್ಲಿ ಮಹಿಳಾ ಶಕ್ತಿ ಪ್ರದರ್ಶನ
ಈ ವರ್ಷ 2 ಬಾರಿ ವರ್ಗಾವಣೆಯಾದರೂ ರದ್ದಾಗಿ ಡಿಸಿಯಾಗಿ ಇಲ್ಲೇ ಉಳಿದಿದ್ದ ಡಾ.ಎಂ.ಆರ್.ರವಿ ಅವರ ಸ್ಥಾನಕ್ಕೆ ಚಾರುಲತಾ ಸೋಮಲ್ ನೇಮಕವಾದರು. ಹರ್ಷಲ್ ಭೋಯರ್ ಸ್ಥಾನಕ್ಕೆ ನೂತನ ಸಿಇಒ ಆಗಿ ಕೆ.ಎಂ.ಗಾಯತ್ರಿ ಅಧಿಕಾರ ಹಿಡಿದರು. ಡಿಸಿ, ಎಸ್ಪಿ ಹಾಗೂ ಸಿಇಒ ಸ್ಥಾನಗಳನ್ನು ಮಹಿಳೆಯರೇ ಹಿಡಿದು ಮಹಿಳಾ ಶಕ್ತಿಯನ್ನು ತೋರುತ್ತಿದ್ದಾರೆ.
ಈ ವರ್ಷ ದುರಂತ, ಸಂತಸ, ಕೊರೊನಾ ಕರಿಛಾಯೆ ಎಲ್ಲವೂ ಮೇಳೈಸಿತು. ಸಂತಸದ ವರ್ಷ ಬರಲಿ ಎಂದು 2022ರನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಆರೋಪಿ ಜೊತೆ ನಿರಂತರ ಸಂಪರ್ಕ ; ಹೆಡ್ ಕಾನ್‌ಸ್ಟೇಬಲ್ ಸಸ್ಪೆಂಡ್