ಬೆಂಗಳೂರು: ವಿಶ್ವ ವಿದ್ಯಾಲಯಗಳಲ್ಲಿ ಸರಿಯಾಗಿ ಪಾಠ ಮಾಡಲು ಬೋಧಕರು ಇಲ್ಲದೇ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಭಾಗಶಃ ರಾಜ್ಯದ ಎಲ್ಲಾ ವಿ.ವಿಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಹೀಗಾಗಿ ಯುಜಿಸಿ ಎಲ್ಲಾ ವಿಶ್ವವಿದ್ಯಾಲಯಗಳಿಗೆ 6 ತಿಂಗಳೊಳಗೆ ಹುದ್ದೆ ಭರ್ತಿ ಮಾಡುವಂತೆ ಖಡಕ್ ಸೂಚನೆ ನೀಡಿದೆ.
ಬೆಂಗಳೂರು ವಿಶ್ವ ವಿದ್ಯಾಲಯವೊಂದರಲ್ಲೇ ಬರೋಬ್ಬರಿ 300 ಹುದ್ದೆಗಳು ಖಾಲಿ ಇವೆ. ಅತಿಥಿ ಉಪನ್ಯಾಸಕರ ಬಲದಿಂದಲ್ಲೇ ಪ್ರವಚನ ನಡೆಯುವ ಸ್ಥಿತಿ ಎದುರಾಗಿದೆ. ಕೇವಲ ಬೆಂಗಳೂರು ವಿವಿ ಮಾತ್ರವಲ್ಲ, ಎಲ್ಲಾ ವಿವಿಗಳಲ್ಲೂ ಕೊರತೆ ಇದೆ. ಹುದ್ದೆಗಳಿಗೆ ಸಿಬ್ಬಂದಿ ಹುಡುಕಾಟದಲ್ಲಿ ಇದ್ದೇವೆ. ಇದರ ನಡುವೆ ಬೇರೆ ಕೋರ್ಸ್ಗಳನ್ನು ಆರಂಭಿಸುವ ಚಿಂತನೆ ಬೆಂಗಳೂರು ವಿವಿಯಲ್ಲಿದೆ. ಆದರೆ ಈಗಾಗಲೇ ಬಾಕಿ ಇರುವ 300 ಖಾಲಿ ಹುದ್ದೆಗಳು ಭರ್ತಿಯಾದ ನಂತರ ಇತರೆ ಕೋರ್ಸ್ಗಳನ್ನು ಶುರು ಮಾಡಲಾಗುವುದು. ಯುಜಿಸಿ 6 ತಿಂಗಳೊಳಗೆ ವಿವಿಯ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವಂತೆ ಮಾರ್ಗಸೂಚಿ ನೀಡಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ ಆರ್ ವೇಣುಗೋಪಾಲ್ ತಿಳಿಸಿದರು.
ವಿದ್ಯಾರ್ಥಿ ಸಂಘದ ಎಸ್ಎಫ್ಐನ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಮಾತನಾಡಿ, ಉಪನ್ಯಾಸಕರು ಇಲ್ಲದೇ ವಿದ್ಯಾರ್ಥಿ ಸಮುದಾಯ ಒದ್ದಾಡುವ ಪರಿಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ 24 ಸರ್ಕಾರಿ ವ್ಯಾಪ್ತಿಯ ವಿಶ್ವವಿದ್ಯಾಲಯಗಳಲ್ಲಿ 1,500 ರಷ್ಟು ಬೋಧಕ- ಬೋಧಕೇತರ ಹುದ್ದೆಗಳು ಖಾಲಿ ಇವೆ. ಜೊತೆಗೆ ಪದವಿ ಕಾಲೇಜುಗಳಲ್ಲೂ 3,500 ರಷ್ಟು ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಪ್ರತಿ ಬಾರಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ ಇದು ಕೂಡ ಸಮರ್ಪಕವಾಗಿ ನಡೆಯದೇ ಇರುವುದರಿಂದ ವಿದ್ಯಾರ್ಥಿ ಸಮುದಾಯದ ಶಿಕ್ಷಣದ ಮೇಲೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂದು ತಿಳಿಸಿದರು.