ಬೆಂಗಳೂರು: ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಮತ ಎಣಿಕೆ ದಿನ ಎಣಿಕೆ ಕಾರ್ಯ ಮುಗಿದರೂ ಫಲಿತಾಂಶಕ್ಕಾಗಿ ಸ್ವಲ್ಪ ಹೆಚ್ಚಿನ ಸಮಯ ಕಾಯಬೇಕಿದೆ.
ಹೌದು ಇವಿಎಂ ಮತ್ತು ಕೆಲ ವಿವಿಪ್ಯಾಟ್ ನಡುವಿನ ಮತಗಳ ತಾಳೆ ನೋಡ ಬೇಕಿರುವ ಕಾರಣದಿಂದ ಫಲಿತಾಂಶದ ಅಧಿಕೃತ ಘೋಷಣೆ ವಿಳಂಬವಾಗಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಮತಗಟ್ಟೆಗಳ ವಿವಿ ಪ್ಯಾಟ್ ತೆರೆದು ಮತಗಳ ಎಣಿಕೆ ನಡೆಸಬೇಕಿದೆ. ಇವಿಎಂ ಮತಗಳ ಜೊತೆ ತಾಳೆ ಮಾಡಬೇಕಿದೆ. ಯಾವ ಮತಗಟ್ಟೆಯ ವಿವಿ ಪ್ಯಾಟ್ ಎನ್ನುವುದನ್ನು ಲಾಟರಿ ಮೂಲಕ ಆಯ್ಕೆ ಮಾಡಲಿದ್ದು, ಒಂದು ವಿವಿ ಪ್ಯಾಟ್ ತೆರೆದು ಮತ ಎಣಿಕೆ ಮಾಡಿ ಅದನ್ನು ಸೀಲ್ ಮಾಡಿದ ನಂತರ ಮತ್ತೊಂದು ವಿವಿ ಪ್ಯಾಟ್ ತೆರೆದು ಮತ ಎಣಿಕೆ ಮಾಡಲಾಗುತ್ತದೆ. ಮತ ಎಣಿಕೆ ಆರಂಭಗೊಳ್ಳುತ್ತಿದ್ದಂತೆ ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದೆ ನಂತರ ಇವಿಎಂ ಮತಗಳ ಎಣಿಕೆ ನಡೆಸಲಾಗುತ್ತದೆ ಈ ಎರಡೂ ಮತಗಳ ಎಣಿಕೆ ಮುಕ್ತಾಯಗೊಂಡ ನಂತರ ಲಾಟರಿ ಮೂಲಕ ಆಯ್ಕೆ ಮಾಡುವ ವಿವಿ ಪ್ಯಾಟ್ ಗಳ ಮತ ಎಣಿಕೆ ನಡೆಸಲಾಗುತ್ತದೆ.
ವಿವಿ ಪ್ಯಾಟ್ ಮತಗಳನ್ನು ಇವಿಎಂ ಜೊತೆ ತಾಳೆ ಮಾಡುವ ಕಾರಣ ಈ ಬಾರಿ ಫಲಿತಾಂಶ ಪ್ರಕಟಕ್ಕೆ ಹೆಚ್ಚಿನ ಸಮಯ ಬೇಕಾಗಲಿದೆ. ಮತಗಟ್ಟೆಗಳ ಸಂಖ್ಯೆ,ಮತದಾನದ ಪ್ರಮಾಣ ಹೆಚ್ಚಾಗಿರುವ ಕಡೆ ಇನ್ನೂ ಹೆಚ್ಚಿನ ಸಮಯಾವಕಾಶ ಬೇಕಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.