ಬೆಂಗಳೂರು: ಇಂದು ಬೆಳಗಾಗುವಷ್ಟರಲ್ಲಿ ರೌಡಿಗಳಿಗೆ ಪೊಲೀಸರ ದರ್ಶನವಾಗಿದೆ. ನಿದ್ದೆ ಮಂಪರಿನಲ್ಲಿದ್ದ ರೌಡಿಗಳು ಹಾಸಿಗೆಯಲ್ಲೇ ಬೆವತಿದ್ದಾರೆ.
ಹೌದು, ನಗರದ ರೌಡಿಗಳ ಮನೆಗಳ ಮೇಲೆ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣನವರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ, ನಿದ್ದೆ ಮಂಪರಿನಲ್ಲಿದ್ದ ರೌಡಿಗಳಿಗೆ ಶಾಕ್ ನೀಡಿದ್ದಾರೆ.
ನಸುಕಿನ 3 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ದಾಳಿ ನಡೆಸಿ, ಪಶ್ಚಿಮ ವಿಭಾಗದ ಸುಮಾರು 150 ಕ್ಕೂ ಹೆಚ್ಚು ರೌಡಿಗಳನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಪಶ್ಚಿಮ ವಿಭಾಗದ ಬಹುತೇಕ ಎಲ್ಲಾ ರೌಡಿಶೀಟರ್ಗಳು ಇತ್ತೀಚೆಗೆ ರೌಡಿಸಂನಲ್ಲಿ ಚುರುಕಾಗಿರುವ ಮಾಹಿತಿ ಡಿಸಿಪಿ ರವಿ ಡಿ ಚೆನ್ನಣ್ಣನವರ್ಗೆ ಮಾಹಿತಿ ಸಿಕ್ಕಿತ್ತು. ಹಾಗಾಗಿ ಬೆಳಗಿನ ಜಾವ ಏಕಾಏಕಿ ದಾಳಿ ಮಾಡಿದ್ದಾರೆ.
ಮತ್ತೊಂದೆಡೆ ಇತ್ತೀಚೆಗಷ್ಟೇ ಹಾಡಹಗಲೇ ರೌಡಿ ಲಕ್ಷಣನನ್ನು ನಡು ರಸ್ತೆಯಲ್ಲೇ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಇದು ಇಡೀ ಸಿಲಿಕಾನ್ ಸಿಟಿಯನ್ನೇ ಬೆಚ್ಚಿ ಬೀಳಿಸಿತ್ತು. ಹೀಗಾಗಿ ನಗರದಲ್ಲಿ ರೌಡಿಸಂನಲ್ಲಿ ಆ್ಯಕ್ಟಿವ್ ಇರುವ ರೌಡಿಗಳ ಮನೆ ಮೇಲೆ ದಾಳಿ ನಡೆಸಲು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಸೂಚನೆ ನೀಡಿದ್ದರು. ಈ ಸೂಚನೆ ಮೇರೆಗೆ ದಾಳಿ ನಡೆಸಿ ರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.