ಬೆಂಗಳೂರು: ನಿನ್ನೆ ರಾತ್ರಿ ಸುರಿದ ಮಳೆಯಿಂದ ನಮ್ಮ ಮೆಟ್ರೋದ ಮೆಜೆಸ್ಟಿಕ್ ನಿಲ್ದಾಣದ ಕಂಟ್ರೋಲ್ ರೂಂ ಬಳಿ ಮಳೆ ನೀರು ಸೋರಿಕೆಯಾಗಿದೆ.
ಈ ಹಿಂದೆಯೇ ನೀರು ಸೋರಿಕೆ ತಡೆಯಲು ಚಾವಣಿಗೆ ಪ್ಲಾಸ್ಟಿಕ್ ಪರದೇ ಹಾಕಲಾಗಿತ್ತು. ಆದರೆ, ಹೆಚ್ಚಿನ ಮಳೆ ಆಗಿದ್ದರಿಂದ ಹಾಕಿದ ಪ್ಲಾಸ್ಟಿಕ್ ಪರದೆಯನ್ನೂ ದಾಟಿ ನೀರು ಹರಿದು ಬಂದಿದ್ದರಿಂದ ನಿಯಂತ್ರಣ ಕೊಠಡಿಯವರೆಗೂ ಹರಿದು ಬಂದು ಸಂಕಷ್ಟ ತಂದೊಡ್ಡಿದೆ.
ಇನ್ನು ನಿಯಂತ್ರಣ ಕೊಠಡಿಯಲ್ಲಿ ಕಂಪ್ಯೂಟರ್ಗಳಿದ್ದು, ರೈಲುಗಳು ಬರುವ ಮಾಹಿತಿ, ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಮೊದಲಾದವುಗಳನ್ನು ಸಿಬ್ಬಂದಿ ನಿರಂತರವಾಗಿ ಪರಿಶೀಲಿಸುತ್ತಾರೆ. ಮಳೆಯಿಂದಾಗಿ ಸಿಬ್ಬಂದಿ ಕೆಲಸಕ್ಕೆ ಅಡಚಣೆಯಾಗಿದೆ. ಇದು ಕಳಪೆ ಕಾಮಗಾರಿಯಾಗಿದ್ದು, ಈ ಕುರಿತು ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರಲಾಗಿದೆ ಎಂದು ಬಿಎಂಆರ್ ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯ ನಾರಾಯಣ ಮೂರ್ತಿ ತಿಳಿಸಿದ್ದಾರೆ.
ಈ ಕುರಿತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌಹಾಣ್ ಪ್ರತಿಕ್ರಿಯಿಸಿ, ಜಾಯಿಂಟ್ ಕಾಮಗಾರಿ ನಿನ್ನೆಯಿಂದ ಪ್ರಗತಿಯಲ್ಲಿದೆ. ಮೊದಲೇ ಅಲ್ಲಿ ತೇವಾಂಶ ಕಾಣಿಸಿಕೊಂಡ ಕಾರಣ ಕಾಮಗಾರಿಗೆ ಮುಂದಾಗಿದ್ದರು. ಜನರಲ್ಲಿ ಭಯ ಬೇಡ. ಇಂದು ಸಂಜೆ ವೇಳೆಗೆ ಸೋರಿಕೆ ಸರಿಹೋಗುತ್ತದೆ. ಮೆಟ್ರೋ ಸುರಂಗ ಸಂಪೂರ್ಣ ಟನಲ್ ಮಾದರಿಯಲ್ಲಿ ಕಟ್ಟಿರುವುದು. ಯಾವುದೇ ಅಪಾಯ ಇಲ್ಲ ಎಂದರು.