ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ನಡೆದ ವೈದ್ಯರ ಮೇಲಿನ ಹಲ್ಲೆಗೆ ಎಲ್ಲೆಡೆ ಭಾರಿ ವಿರೋಧದ ಕೂಗು ಕೇಳಿ ಬರುತ್ತಿದೆ. ಈ ದೌರ್ಜನ್ಯ ಖಂಡಿಸಿ ಇಂದು ವೈದ್ಯರು ದೇಶವ್ಯಾಪ್ತಿ ಪ್ರತಿಭಟನೆ ನಡೆಸಿದ್ದಾರೆ.
ರಾಜಧಾನಿಯಲ್ಲೂ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ವತಿಯಿಂದ ಖಾಸಗಿ ಆಸ್ಪತ್ರೆ ಹಾಗೂ ಫನಾ ಅಡಿಯಲ್ಲಿ ಬರುವ ವೈದ್ಯರು ಕಪ್ಪು ಪಟ್ಟಿ ಧರಿಸಿ ಚಾಮರಾಜಪೇಟೆಯ ಭಾರತೀಯ ವೈದ್ಯಕೀಯ ಸಂಸ್ಥೆಯ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 2 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಒಪಿಡಿ ಬಂದ್ ಮಾಡಿ ಕೇವಲ ತುರ್ತು ಚಿಕಿತ್ಸಾ ಸೇವೆಗೆ ಮಾತ್ರ ಅವಕಾಶ ನೀಡಿದರು. ಇದರೊಟ್ಟಿಗೆ ಇಡೀ ದಿನ ಕಪ್ಪು ಪಟ್ಟಿ ಧರಿಸಿ ವೈದ್ಯರು ಕಾರ್ಯನಿರ್ವಹಿಸಿದರು.