ಬೆಂಗಳೂರು: ಸದ್ಯದಲ್ಲೇ ಅಪ್ಪಳಿಸಲಿರುವ ಫೋನಿ ಚಂಡಮಾರುತ ರಾಜ್ಯಕ್ಕೆ ಭಾರೀ ಪ್ರಮಾಣದಲ್ಲಿ ಪ್ರಭಾವ ಬೀಳಬಹುದೆಂಬ ಆತಂಕ ದೂರವಾಗಿದ್ದು, ಚಂಡಮಾರುತದ ಬಗ್ಗೆ ಹವಾಮಾನ ವರದಿ ಕೆಲವೊಂದು ವಿಷಯಗಳನ್ನು ಹೊರಹಾಕಿದೆ.
ಫೋನಿ ಚಂಡಮಾರುತ ಹಾದು ಹೋಗುವ ಟ್ರ್ಯಾಕ್ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಭೂಪ್ರದೇಶಕ್ಕೆ ಹೆಚ್ಚು ಬಾರದೆ ಕರಾವಳಿ ತೀರದಲ್ಲೇ ಹಾದುಹೋಗಬಹುದೆಂದು ಸದ್ಯದ ಹವಾಮಾನ ವರದಿ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗಿರುವ ಫೋನಿ ಚಂಡಮಾರುತ ಇಪ್ಪತ್ನಾಲ್ಕು ಗಂಟೆಯಲ್ಲಿ ತಮಿಳುನಾಡಿನೆಡೆಗೆ ಅಪ್ಪಳಿಸಲಿದೆ. ಕರ್ನಾಟಕದ ಮೇಲೆ ನೇರ ಪರಿಣಾಮ ಬೀಳದಿದ್ರೂ, ಪರೋಕ್ಷ ಪ್ರಭಾವ ಬೀರಲಿರುವುದರಿಂದ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಫೋನಿ ಚಂಡಮಾರುತ ಕರಾವಳಿ ತೀರಗಳಿಗೆ ಸಮೀಪಿಸಲಿದೆ. ಏಪ್ರಿಲ್ 29, 30, ಮೇ 1ರಂದು ರಾಜ್ಯದಲ್ಲಿ ಮಳೆಯಾಗಲಿದೆ. ತಮಿಳುನಾಡು ಹಾಗೂ ಆಂಧ್ರ ಕರಾವಳಿ ಪ್ರದೇಶಗಳ ಮೂಲಕ ಹಾದು ಹೋಗುವ ಸೈಕ್ಲೋನ್, ಬಳಿಕ ಒಡಿಶಾದೆಡೆಗೆ ಚಲಿಸಲಿದೆ. ಈ ವೇಳೆ ತಮಿಳುನಾಡಿನ ಕರಾವಳಿಯಲ್ಲಿ ಹೆಚ್ಚು ಮಳೆಯಾಗಲಿದ್ದು, ಕರ್ನಾಟಕದ ಕರಾವಳಿ ಪ್ರದೇಶ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಆದರೆ, ಚಂಡಮಾರುತದ ತೀವ್ರತೆ, ಗಾಳಿಯ ವೇಗ ಎಷ್ಟಿದೆ ಎಂಬುದು ನಿಖರವಾಗಿ ಗೊತ್ತಾಗಬೇಕಿದೆ ಎಂದು ಹವಾಮಾನ ವರದಿ ತಿಳಿಸಿದೆ.
ಮೂರ್ನಾಲ್ಕು ದಿನದ ಹಿಂದೆ ರಾಜ್ಯಕ್ಕೆ ಭಾರೀ ಪ್ರಭಾವ ಬೀಳಬಹುದೆಂಬ ವರದಿ ಇತ್ತು. ಆದರೆ, ನಿನ್ನೆ ಮತ್ತು ಇವತ್ತಿನ ವರದಿ ನೋಡಿದ್ರೆ ಚಂಡಮಾರುತ ಹಾದು ಹೋಗುವ ಟ್ರ್ಯಾಕ್ ಬದಲಾಗ್ತಿದೆ. ಹೆಚ್ಚು ಭೂಮಿ ಮೇಲೆ ಬಾರದೆ ಬಂಗಾಳಕೊಲ್ಲಿಯ ಕರಾವಳಿ ಭಾಗದಲ್ಲೇ ಹಾದುಹೋಗುವ ಮುನ್ಸೂಚನೆ ಇದೆ. ಏಪ್ರಿಲ್ 29, 30, ಮೇ 1ರಂದು ಮಳೆಯಾಗಬಹುದು, ಮೋಡಗಳು ಕರಾವಳಿ ಭಾಗದಲ್ಲಿ ಪಸರಿಸೋದ್ರಿಂದ ಮಳೆಯಾಗಬಹುದು ಎಂದು ವರದಿಯಾಗಿದೆ.