ಬೆಂಗಳೂರು :ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚಿಸಲು ಪಕ್ಷೇತರ ಶಾಸಕರಾದ ಆರ್ ಶಂಕರ್, ಹೆಚ್ ನಾಗೇಶ್ ಅವರ ಬೆಂಬಲ ಪಡೆಯುವಲ್ಲಿ ಡಿ.ಕೆ ಶಿವಕುಮಾರ್ ಯಶಸ್ವಿಯಾಗಿದ್ದರು. ಆದರೀಗ, ಅದೇ ಪಕ್ಷೇತರ ಶಾಸಕರಿಗೆ ಡಿಕೆಶಿ ಸಿಂಹಸ್ವಪ್ನವಾಗಿದ್ದಾರೆ ಎನ್ನಲಾಗಿದೆ.
ಸದನದಲ್ಲಿ ನಾಳೆ ಬಹುಮತ ಸಾಬೀತು ಹಿನ್ನೆಲೆ ಪಕ್ಷೇತರ ಶಾಸಕರು ಬೆಂಗಳೂರಿನ ಬೇರೆಡೆ ವಾಸ್ತವ್ಯ ಹೂಡಿದರೆ ಸಚಿವ ಡಿ.ಕೆ ಶಿವಕುಮಾರ್ ಸಂಪರ್ಕಿಸಿ ಕರೆದೊಯ್ಯಬಹುದೆಂಬ ಭಯ ಎದುರಾಗಿದೆ ಎಂದು ಪಕ್ಷೇತರ ಶಾಸಕರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಪಕ್ಷೇತರರಿಗೆ ಎಸ್.ಆರ್.ವಿ ರಕ್ಷಣೆ:
ನಾವು ಬೆಂಗಳೂರಿನಲ್ಲಿ ಎಲ್ಲೆ ಇದ್ರು ಡಿಕೆಶಿ ಹಾಗೂ ಸಿದ್ದರಾಮಯ್ಯ ನಮ್ಮನ್ನ ಸಂಪರ್ಕಿಸಲು ಬರುತ್ತಾರೆ. ನಾವೆಲ್ಲಿದ್ದರೂ ನಮ್ಮನ್ನು ಹುಡುಕುತ್ತಾರೆ ಎಂದು ಪಕ್ಷೇತರ ಶಾಸಕರು ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆ ಪಕ್ಷೇತರ ಶಾಸಕರಿಬ್ಬರನ್ನು ರಮಡಾ ರೆಸಾರ್ಟ್ಗೆ ಕರೆತರುವ ಜವಾಬ್ದಾರಿಯನ್ನು ಶಾಸಕ ಎಸ್.ಆರ್ ವಿಶ್ವನಾಥ್ಗೆ ವಹಿಸಲಾಗಿದೆ. ಪಕ್ಷೇತರರು ಯಾವುದೇ ಕಾರಣಕ್ಕೂ ಮೈತ್ರಿ ಕಡೆ ವಾಲದಂತೆ ಬಿಜೆಪಿ ನಾಯಕರು ಹದ್ದಿನ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.