ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಬಳಿಕ ಮಾತನಾಡಿದ ಸಿಎಂ, ಮಕ್ಕಳ ಕಲಿಕೆಯ ಕುರಿತು ಏಕಕಾಲದಲ್ಲಿ 40 ಲಕ್ಷ ಮಕ್ಕಳ ಮೌಲ್ಯಮಾಪನ ನಡೆಸಿದ ಏಕೈಕ ರಾಜ್ಯ ನಮ್ಮದು. ಈ ಮೌಲ್ಯಮಾಪನದ ಆಧಾರದಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಗುರುತಿಸಿ ಪರಿಹಾರ ಬೋಧನೆಗೆ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ತಿಳಿಸಿದರು.
ಮಕ್ಕಳ ಆಲೋಚನಾ ಮತ್ತು ಅನ್ವಯಿಕ ಶಕ್ತಿಯನ್ನು (Higher order thinking) ವೃದ್ಧಿಸುವ ನಿಟ್ಟಿನಲ್ಲಿ ಪರೀಕ್ಷಾ ವಿಧಾನದಲ್ಲಿ ಸೂಕ್ತ ಬದಲಾವಣೆ ತರಬೇಕು. ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಸಮರ್ಪಕವಾಗಿ ನಡೆಯುವಲ್ಲಿ ಕೇಂದ್ರದ ಅನುದಾನಕ್ಕೆ ಕಾಯದೆ, ಎರಡು ಜೊತೆ ಸಮವಸ್ತ್ರ ವಿತರಿಸುವಂತೆ ಇದೇ ವೇಳೆ ಸಿಎಂ ಸೂಚನೆ ನೀಡಿದರು.
ಸರ್ಕಾರಿ ಇಂಗ್ಲೀಷ್ ಶಾಲೆಗಳ ಹೆಚ್ಚಳಕ್ಕೆ ಆದ್ಯತೆ
ಸರ್ಕಾರಿ ಇಂಗ್ಲೀಷ್ ಮಾಧ್ಯಮದ 300 ಶಾಲೆಗಳಲ್ಲಿ ಹೆಚ್ಚುವರಿ ತರಗತಿಗಳನ್ನು ಪ್ರಾರಂಭಿಸುವಂತೆ ಬೇಡಿಕೆ ಬಂದಿದೆ. ನುರಿತ ತರಬೇತಿ ಹೊಂದಿದ ಶಿಕ್ಷಕರು ಈ ಶಾಲೆಗಳಲ್ಲಿ ಲಭ್ಯವಿದ್ದರೆ ಇನ್ನು ಒಂದು ಹೆಚ್ಚುವರಿ ತರಗತಿಯನ್ನು ಪ್ರಾರಂಭಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.
ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಗಳನ್ನು ವಿಲೀನಗೊಳಿಸಿ, ಒಂದೇ ಮಂಡಳಿಯ ಮೂಲಕ 10 ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚರ್ಚಿಸಿ, ಇದಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಹಾಗೂ ಗ್ರಂಥಾಲಯ ಇಲಾಖೆಯಡಿಯಲ್ಲಿ ಡಿಜಿಟಲ್ ಲೈಬ್ರರಿಗಳನ್ನು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.