ಬೆಂಗಳೂರು: ಅರಣ್ಯ ರಕ್ಷಿಸುವ ಕುರಿತು ನಾವೀಗ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಮಾನವನ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಕಾಡ್ಗಿಚ್ಚು ಸಂಭವಿಸಿ ಅರಣ್ಯ ಸಂಪತ್ತು ಹಾನಿ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಡಿಗೆ ರಕ್ಷಣೆ ನೀಡಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿ ಕೊಡಗು ಜಿಲ್ಲೆ ಕಾತಕೇರಿ ಗ್ರಾಮದ ಕೆ.ವಿ.ರವಿ ಚೆಂಗಪ್ಪ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ಪೀಠದಲ್ಲಿ ನಡೆಯಿತು.
ರಾಜ್ಯದ ಎಲ್ಲಾ ಅರಣ್ಯ ವಲಯಗಳಲ್ಲಿ ಕಾಡ್ಗಿಚ್ಚು ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತಕ್ಷಣ ಮುಂದಾಗಬೇಕು. ಹಾಗೆ ಇದಕ್ಕಾಗಿ ಎಲ್ಲಾ ಇಲಾಖೆಗಳ ಸಹಕಾರ ಪಡೆಯಬೇಕು. ಅವಘಡ ಸಂಭವಿಸಿದರೆ ಸ್ಥಳೀಯ ಅರಣ್ಯ ಅಧಿಕಾರಿಗಳನ್ನ ಹೊಣೆ ಮಾಡಬೇಕು ಎಂದು ಕೋರ್ಟ್ ಹೇಳಿದೆ.
ಹಾಗೆಯೇ ಅರಣ್ಯ ಸಂರಕ್ಷಣೆಗೆ ಸ್ಥಳೀಯರು ಹಾಗೂ ಅರ್ಜಿದಾರ ಕೆ.ವಿ.ಚೆಂಗಪ್ಪರನ್ನ ಒಳಗೊಂಡ ಅಧಿಕಾರಿಗಳ ತಂಡ ರಚಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಇದೇ ವೇಳೆ ಅರ್ಜಿದಾರರ ವಕೀಲರು ಅವಘಡ ತಪ್ಪಿಸಲು ಡ್ರೋಣ್ ಕ್ಯಾಮರಾಗಳ ವ್ಯವಸ್ಥೆ ಮಾಡಬೇಕು ಎಂದು ಕೋರಿದರು. ಈ ಬಗ್ಗೆಯೂ ರಕ್ಷಣಾ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ