ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ನೀಡಿರುವ ಮಧ್ಯಂತರ ಚುನಾವಣೆ ಹೇಳಿಕೆ ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಜೊತೆ ವೇಣುಗೋಪಾಲ್ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.
ದೊಡ್ಡಗೌಡರ ಈ ಹೇಳಿಕೆ ರಾಜಕೀಯವಾಗಿ ಹೊಸ ತಿರುವು ಪಡೆಯುತ್ತಿದ್ದಂತೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ದೂರವಾಣಿ ಮೂಲಕ ದೇವೇಗೌಡರ ಜತೆ ಮಾತುಕತೆ ನಡೆಸಿದ್ದಾರೆ. ಕರೆ ಮಾಡಿ ಇದೇನು ಸಾರ್ ನೀವೇ ಈ ರೀತಿ ಹೇಳಿಕೆ ಕೊಟ್ಟಿದ್ದೀರಲ್ಲ?. ನಿಮ್ಮ ಹೇಳಿಕೆಯೇ ಹಲವು ರಾಜಕೀಯ ತಿರುವು ಪಡೆಯುತ್ತಿದೆ. ಏನಕ್ಕೆ ಈ ರೀತಿ ಮಾತನಾಡಿದ್ದೀರಾ?. ಏನಾದ್ರು ಸಮಸ್ಯೆ ಆಗಿದೆಯಾ? ಎಂದು ಪ್ರಶ್ನಿಸಿದ್ದಾರೆ ಎನ್ನಲಾಗ್ತಿದೆ.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಿಶ್ಚಿತ: ದೇವೇಗೌಡ
ವೇಣುಗೋಪಾಲ್ ಪ್ರಶ್ನೆಗೆ ದೇವೇಗೌಡರು ತಾನು ಆ ರೀತಿ ಹೇಳಿಲ್ಲವೆಂದು ಸಮಜಾಯಿಷಿ ನೀಡಿದ್ದಾರೆ. ನಾನು ಪಂಚಾಯತ್ ಎಲೆಕ್ಷನ್ ಬಗ್ಗೆ ಮಾತನಾಡಿದ್ದು. ಆದರೆ ಮಾಧ್ಯಮದವರೇ ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ವಿವರಿಸಿದ್ದಾರೆ ಎಂದು ಹೇಳಲಾಗ್ತಿದೆ. ಇನ್ನು ಉಭಯ ನಾಯಕರ ದೂರವಾಣಿ ಸಂಭಾಷಣೆಯ ಬಳಿಕ ದೇವೇಗೌಡರು ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಅರಮನೆ ಮೈದಾನದ ಕಾರ್ಯಕ್ರಮದಲ್ಲಿ ನೀಡಿದ್ದ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೆಚ್ಡಿಡಿ ಯು ಟರ್ನ್ ಹೊಡೆದಿದ್ದಾರೆ.