ಬೆಂಗಳೂರು: ನಗರದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಪೇಯಿಂಗ್ ಗೆಸ್ಟ್ ಹೌಸ್ಗಳನ್ನು ನಿಯಂತ್ರಿಸಲು ಸರ್ಕಾರ ಹೊಸ ಪಾಲಿಸಿ ರಚಿಸಿದೆ. ಆದರೆ ಪಿಜಿ ಮಾಲೀಕರೊಂದಿಗೆ ಸರ್ಕಾರ ಚೌಕಾಸಿಗಿಳಿದಿರುವ ಪರಿಣಾಮ ಪಾಲಿಸಿ ಜಾರಿ ವಿಳಂಬವಾಗುತ್ತಿದೆ.
ಪೇಯಿಂಗ್ ಗೆಸ್ಟ್.. ಈ ಪರಿಕಲ್ಪನೆ ಉದ್ಯೋಗ ಅರಸಿ ದೂರ ದೂರುಗಳಿಂದ ಸಿಲಿಕಾನ್ ಸಿಟಿಗೆ ಬರುವ ಜನರಿಗೆ ಅಕ್ಷರಶಃ ಆಶ್ರಯ ತಾಣ. ವಿದ್ಯಾರ್ಥಿಗಳಿಗೂ ಕೂಡ ಸೂರು ಕಲ್ಪಿಸುತ್ತಿದೆ. ಕಡಿಮೆ ದರದಲ್ಲಿ ಊಟ, ವಸತಿ ಸೌಲಭ್ಯ ಸಿಗೋದರಿಂದ ದುಬಾರಿ ಮನೆ ಬಾಡಿಗೆ, ಮುಂಗಡ ಹಣ ಪಾವತಿ ಎನ್ನುವ ಟೆನ್ಶನ್ ಇಲ್ಲದೇ ನೆಮ್ಮದಿಯ ಜೀವನ ಸಾಗಿಸಲು ಸಹಕಾರಿಯಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಕಟ್ಟಡ ಮಾಲೀಕರ ದುರಾಸೆಯಿಂದಾಗಿ ಪಿಜಿಗಳು ಅವ್ಯವಸ್ಥೆಗಳ ಆಗರವಾಗುತ್ತಿವೆ. ಕಡಿಮೆ ವಿಸ್ತೀರ್ಣದ ಕೊಠಡಿಯಲ್ಲಿ ನಾಲ್ಕೈದು ಜನರಿಗೆ ವಾಸ್ತವ್ಯಕ್ಕೆ ಅವಕಾಶ ಕೊಡಲಾಗುತ್ತಿದೆ. ಇಕ್ಕಟ್ಟಿನಲ್ಲಿ ಹೊಂದಾಣಿಕೆ ಮಾಡಿಕೊಂಡು ಪಿಜಿಗಳಲ್ಲಿ ಕಾಲ ತಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಪಿಜಿಗಳಿಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎನ್ನುವ ಮಾಹಿತಿಯೇ ಇಲ್ಲದಂತಾಗಿದೆ. ವಾಸ ಮಾಡುವವರ ಪೂರ್ವಾಪರ ಮಾಹಿತಿ ಕೂಡ ಬಹುತೇಕ ಮಾಲೀಕರ ಅಥವಾ ಪಿಜಿ ನಡೆಸುವವರ ಬಳಿ ಇಲ್ಲ. ಅಪರಾಧ ಕೃತ್ಯಗಳು ನಡೆದಾಗ ಇದೆಲ್ಲಾ ಬೆಳಕಿಗೆ ಬರುತ್ತಿದೆ.
ಇನ್ನು ಕೆಲವೆಡೆ ಮಹಿಳಾ ಪಿಜಿಗಳಿಗೆ ನುಗ್ಗಿ ದೌರ್ಜನ್ಯ ನಡೆಸಿರುವ ಘಟನೆಗಳೂ ನಡೆದಿವೆ. ಮಹಿಳೆಯರ ರಕ್ಷಣೆಗೆ ಪಿಜಿ ಮಾಲೀಕರು ಸೂಕ್ತ ಕ್ರಮ ಕೈಗೊಂಡಿಲ್ಲ. ಸಿಸಿಟಿವಿ ನೆಪ ಮಾತ್ರಕ್ಕೆ ಎನ್ನುವಂತಿವೆ. ಹಣದಾಸೆಯಿಂದ ಬೇಕಾಬಿಟ್ಟಿಯಾಗಿ ಪಿಜಿಗಳನ್ನು ನಡೆಸಲಾಗುತ್ತಿದೆ. ಈ ಸಂಬಂಧ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ನಗರಾಭಿವೃದ್ಧಿ ಇಲಾಖೆ, ಪೇಯಿಂಗ್ ಗೆಸ್ಟ್ಗಳ ನಿಯಂತ್ರಣಕ್ಕೆ ಮುಂದಾಗಿದೆ. ಅದಕ್ಕಾಗಿ ಹೊಸ ಪಾಲಿಸಿ ರಚಿಸುತ್ತಿದೆ. ಈಗಾಗಲೇ ಕರಡು ರಚನೆಯೂ ಆಗಿದೆ.
ಪಾಲಿಸಿಯಲ್ಲಿರುವ ಅಂಶಗಳು:
1. ಎಷ್ಟು ವಿಸ್ತೀರ್ಣದ ಕೊಠಡಿಯಲ್ಲಿ ಎಷ್ಟು ಜನರ ವಾಸ್ತವ್ಯ..?
2. ಪಿಜಿಗೆ ಬರುವವರ ಪೂರ್ವಾಪರ ವಿವರ ಮತ್ತು ದಾಖಲೆ ಸಂಗ್ರಹ
3. ಭದ್ರತಾ ಕ್ರಮಗಳು
4. ಸಿಸಿಟಿವಿ ಅಳವಡಿಕೆ ಮತ್ತು ಪರಿಶೀಲನೆ
5. ಹೊರ ವ್ಯಕ್ತಿಗಳ ಪಿಜಿ ಪ್ರವೇಶ ನಿರ್ಬಂಧ
6. ಸಕ್ಷಮ ಪ್ರಾಧಿಕಾರದಲ್ಲಿ ನೋಂದಣಿ
7. ವಸತಿ ಮತ್ತು ಊಟಕ್ಕೆ ವಿಧಿಸುವ ಶುಲ್ಕದ ವಿವರ
8. ಪಿಜಿಯಲ್ಲಿರುವವರಿಗೆ ಕಲ್ಪಿಸಬೇಕಾದ ಸೌಲಭ್ಯ
ಈ ಎಲ್ಲಾ ಮಾಹಿತಿಯನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕಾಲ ಕಾಲಕ್ಕೆ ನೀಡಬೇಕು. ಯಾವುದೇ ಘಟನೆ ನಡೆದರೂ ಅದಕ್ಕೆ ಪಿಜಿ ಮಾಲೀಕರನ್ನೇ ಹೊಣೆಯಾಗಿಸಲಾಗುತ್ತದೆ. ಅಷ್ಟೇ ಅಲ್ಲ, ಯಾವುದೇ ನಿಯಮ ಉಲ್ಲಂಘನೆಯಾದಲ್ಲಿ ಪಿಜಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಪಿಜಿ ನಡೆಸಲು ನೀಡಿರುವ ಅನುಮತಿಯನ್ನು ಹಿಂಪಡೆಯಲಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ. ಆದರೆ ಪಾಲಿಸಿ ಜಾರಿ ಮಾತ್ರ ವಿಳಂಬವಾಗುತ್ತಿದೆ. ಇದಕ್ಕೆ ಕಾರಣ ಸರ್ಕಾರ ಪಿಜಿ ಮಾಲೀಕರ ಜೊತೆ ಚೌಕಾಸಿಗಿಳಿದಿರುವುದು. ಸೌಲಭ್ಯ, ಭದ್ರತೆ ಮತ್ತು ದರ ನಿಗದಿ ವಿಚಾರದಲ್ಲಿ ಪಿಜಿ ಮಾಲೀಕರ ಜೊತೆ ಚೌಕಾಸಿ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್, ಪಾಲಿಸಿ ಇವತ್ತು ಹೇಳಿ ನಾಳೆ ಮಾಡಲು ಸಾಧ್ಯವಿಲ್ಲ. ಕಟ್ಟಡ ಮಾಲೀಕರು ಮತ್ತು ಅಲ್ಲಿ ಉಳಿಯುವವರ ಜೊತೆ ಮಾತುಕತೆ ನಡೆಸಬೇಕು. ತುಂಬಾ ಕಟ್ಟುನಿಟ್ಟು ಮಾಡಿದರೆ ಪಿಜಿಯಲ್ಲಿ ಉಳಿಯುವವರಿಗೆ ಹೊರೆಯಾಗಲಿದೆ. ಎಲ್ಲವನ್ನೂ ಪರಿಶೀಲನೆ ಮಾಡುತ್ತೇವೆ ಎನ್ನುತ್ತಿದ್ದಾರೆ.