ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.O ಸರ್ಕಾರದ ಮೊದಲ ಬಜೆಟ್ನಲ್ಲಿ ದೇಶದ ನೆಲ, ಜಲ, ರಕ್ಷಣೆ ಹಾಗೂ ರೈತಾಪಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ಇರಲಿದೆ. ರಾಜ್ಯಕ್ಕೂ ಹೆಚ್ಚಿನ ಪಾಲು ಸಿಗಲಿದೆ ಎನ್ನುವುದು ರಾಜ್ಯ ಬಿಜೆಪಿ ಲೆಕ್ಕಾಚಾರವಾಗಿದೆ.
ಹೌದು, ರಾಜ್ಯ ಬಿಜೆಪಿ ಈ ಬಾರಿ ಮೋದಿ ಸರ್ಕಾರದ ಎರಡನೇ ಇನ್ನಿಂಗ್ಸ್ನ ಮೊದಲ ಬಜೆಟ್ನಲ್ಲಿ ರಾಷ್ಟ್ರೀಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದೆ. ಚುನಾವಣಾ ಪೂರ್ವದಲ್ಲಿ ಮಂಡಿಸಿದ್ದ ಬಜೆಟ್ನ ಮುಂದುವರೆದ ಭಾಗವಾಗಿ ಬಜೆಟ್ ಇದ್ದರೂ ರಕ್ಷಣೆ, ರೈತರ ವಿಷಯಕ್ಕೆ ಆಧ್ಯತೆದ್ಯತೆ ಸಿಗಲಿದೆ. ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳಿಗೆ ಪೂರಕವಾಗಿ ಬಜೆಟ್ ಇರಲಿದೆ ಎನ್ನುವ ವಿಶ್ವಾಸದಲ್ಲಿದೆ.
ಆದಾಯ ತೆರಿಗೆ ಮಿತಿ 5 ಲಕ್ಷಕ್ಕೆ ಹೆಚ್ಚಳ, ಪ್ರತಿ ರೈತ ಕುಟುಂಬಕ್ಕೆ ವಾರ್ಷಿಕ 6 ಸಾವಿರ ಸಹಾಯಧನದ ಜೊತೆಗೆ ಸಾಮಾನ್ಯ ವರ್ಗ ಮತ್ತು ರೈತಾಪಿ ಸಮುದಾಯಕ್ಕೆ ಇನ್ನಷ್ಟು ಕೊಡುಗೆ ಸಿಗಲಿದೆ ಎನ್ನುವ ನಿರೀಕ್ಷೆಯನ್ನು ರಾಜ್ಯ ಬಿಜೆಪಿ ನಾಯಕರು ಇಟ್ಟುಕೊಂಡಿದ್ದಾರೆ. ಜಲ ಶಕ್ತಿ ಉತ್ಪಾನೆ ಹಾಗೂ ನೀರನ್ನು ಉಳಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದು, ಅದರಲ್ಲಿ ಇಡೀ ದೇಶದ ಜನತೆ ಸಹಭಾಗಿಯಾಗಬೇಕು. ಗಿಡಗಳನ್ನು ನೆಡಬೇಕು ಎಂದು ಸಂದೇಶ ನೀಡಿದ್ದು, ಬಜೆಟ್ನಲ್ಲಿ ಅದರ ಸ್ಪಷ್ಟ ಚಿತ್ರಣ ಸಿಗಲಿದೆ.
ಇನ್ನು ಬಡವರಿಗೆ ಹಾಗೂ ಯಾರಿಗೆ ಮೂಲಭೂತ ಅವಶ್ಯಕತೆ ತಲುಪಿಲ್ಲವೋ ಅಂತಹವರಿಗೆ ಸೌಲಭ್ಯ ತಲುಪಿಸುವುದು, ಅದರ ಬಗ್ಗೆ ಸುಧಾರಣೆ, ಅನುಕೂಲ ಸಿಗುವ ರೀತಿ ಬಜೆಟ್ನಲ್ಲಿ ಘೋಷಣೆಯಾಗಲಿದೆ ಎನ್ನುವ ನಿರೀಕ್ಷೆ ಇದೆ. ರೈತರ ರಕ್ಷಣೆ, ನೀರಿನ ರಕ್ಷಣೆ, ಅತಿ ಹಿಂದುಳಿದವರಿಗೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿ ಇನ್ನೂ ಹಿಂದುಳಿದವರಿಗೆ ಆಧ್ಯತೆ, ಕಾಶ್ಮೀರ ಸಮಸ್ಯೆಗೆ ಒತ್ತು ನೀಡುವುದು, ರಕ್ಷಣಾ ಇಲಾಖೆಯನ್ನು ಮತ್ತಷ್ಟು ಸುಧಾರಣೆ ಮಾಡುವ ನಿಟ್ಟಿನಲ್ಲಿ ಬಜೆಟ್ ಬರಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಐದು ವರ್ಷದಲ್ಲಿ ರಾಷ್ಟ್ರವನ್ನು ಅಭಿವೃದ್ಧಿಯ ಕಡೆಗೆ ತೆಗೆದುಕೊಂಡು ಹೋಗುವ ಯೋಜನೆಗೆ ಅಡಿಪಾಯ ಹಾಕುವ ರೀತಿಯಲ್ಲಿ ಬಜೆಟ್ ಇರಲಿದೆ. ಜನರು ಯಾವ ವಿಶ್ವಾಸ ಇಟ್ಟು ಮೋದಿಗೆ ಅವಕಾಶ ಕೊಟ್ಟಿದ್ದಾರೋ ಅವರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಅದಕ್ಕೆ ಪೂರಕವಾಗುವ ರೀತಿಯಲ್ಲಿ ಬಜೆಟ್ ಮಾಡಲಿದ್ದಾರೆ. ರಾಜ್ಯಕ್ಕೆ ಈ ಬಾರಿ ಅನುದಾನದಲ್ಲಿ ಹೆಚ್ಚಿನ ಪಾಲು ಸಿಗಲಿದೆ ಎನ್ನುವ ವಿಶ್ವಾಸವನ್ನು ಶಾಸಕ ಸಿ.ಟಿ.ರವಿ ವ್ಯಕ್ತಪಡಿಸಿದ್ದಾರೆ.