ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲದಿರುವುದರಿಂದ ಸಿಎಂ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ಧರಣಿ ನಡೆಸಲಿದೆ.
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುವ ಬಿಜೆಪಿ ನಾಯಕರು, ಬಳಿಕ ಸ್ಪೀಕರ್ ರಮೇಶ್ಕುಮಾರ್ ಅವರನ್ನು ಭೇಟಿ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ವೇಳೆಗೆ ರಾಜ್ಯಪಾಲರನ್ನು ಭೇಟಿ ಮಾಡಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಶಾಸಕರ ರಾಜೀನಾಮೆಯಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಮಧ್ಯಪ್ರವೇಶಿಸಬೇಕೆಂದು ರಾಜ್ಯಪಾಲರನ್ನು ಕೋರಲಿದ್ದಾರೆ.
ಇನ್ನೊಂದೆಡೆ ಗೊಂದಲಕ್ಕೀಡಾಗಿರುವ ಸಿಎಂ ಕುಮಾರಸ್ವಾಮಿ, ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ರಣತಂತ್ರ ರೂಪಿಸುತ್ತಿದ್ದಾರೆ. ಎರಡು ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಿರುವ ಸಿಎಂ, ಬಿಜೆಪಿಯವರು ರಾಜಭವನಕ್ಕೆ ಭೇಟಿ ಕೊಟ್ಟರೆ, ರಾಜ್ಯಪಾಲರು ವಿಶ್ವಾಸ ಮತಯಾಚನೆಗೆ ಸೂಚಿಸಬಹುದು. ಆಗ ಅಧಿವೇಶನದಲ್ಲಿ ಭಾಷಣ ಮಾಡಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಡೆಸಿರುವ ಪ್ರಯತ್ನವನ್ನು ಸದನದಲ್ಲಿ ದಾಖಲು ಮಾಡಿ ನಂತರ ರಾಜೀನಾಮೆ ಸಲ್ಲಿಸುವ ಬಗ್ಗೆ ಪರಿಶೀಲಿಸುತ್ತಿರುವ ಸಾಧ್ಯತೆ ಇದೆ.
ಒಂದೊಮ್ಮೆ ರಾಜ್ಯಪಾಲರು ಬಹುಮತ ಸಾಬೀತಿಗೆ ಸೂಚನೆ ನೀಡದಿದ್ದರೆ, ಎರಡು ದಿನದಲ್ಲಿ ಅತೃಪ್ತ ಶಾಸಕರು ವಾಪಸ್ ಬಂದರೆ ಆಗ ತಾವೇ ಮುಂದಾಗಿ ವಿಶ್ವಾಸ ಮತಯಾಚನೆ ಮಾಡಿ ಆರು ತಿಂಗಳು ಸರ್ಕಾರವನ್ನು ಸೇಫ್ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.