ಬೆಂಗಳೂರು : ಕಾಂಗ್ರೆಸ್ನ ಅತೃಪ್ತ ಶಾಸಕ ಜಾರಕಿಹೊಳಿ ಮತ್ತವರ ತಂಡದ ಶಾಸಕರನ್ನು ಸೆಳೆಯಲು ವಿಫಲವಾಗಿರುವ ಬಿಜೆಪಿ, ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಈ ಬಾರಿ ಉತ್ತರ ಕರ್ನಾಟಕದ ಜತೆಗೆ ದಕ್ಷಿಣ ಕರ್ನಾಟಕ ಭಾಗದ ಅತೃಪ್ತ ಶಾಸಕರ ಮನವೊಲಿಕೆಗೂ ಪ್ಲಾನ್ ರೂಪಿಸಿದೆ. ಕಳೆದ ಬಾರಿಯ ವಿಫಲ ಪ್ರಯತ್ನದಿಂದ ಪಾಠ ಕಲಿತಿರುವ ಬಿಜೆಪಿ, ಈ ಸಲ ಅವಸರ ಪಡದೆ, ಗೊಂದಲಕ್ಕೆ ಅವಕಾಶ ನೀಡದೆ, ಪಕ್ಕಾ ಲೆಕ್ಕಾಚಾರದ ಪ್ರಕಾರ ಅತೃಪ್ತ ಶಾಸಕರ ಆಪರೇಷನ್ಗೆ ವೇದಿಕೆ ಸಿದ್ದಪಡಿಸಿದೆ. ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಶಾಸಕರನ್ನು ಸೆಳೆಯುವುದು ಈ ಸಲದ ಆಪರೇಷನ್ ಕಮಲದ ತಂತ್ರವಾಗಿದೆ. ಅದಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಅತೃಪ್ತರಾಗಿರುವ ಹಾಗೂ ಬಿಜೆಪಿ ಬಗ್ಗೆ ಒಲವು ಹೊಂದಿರುವ ಶಾಸಕರ ಪಟ್ಟಿಯನ್ನು ಸಿದ್ಧಪಡಿಸಿದೆ.
ಪಟ್ಟಿಯಲ್ಲಿರುವ ದೋಸ್ತಿ ಪಕ್ಷಗಳ ಅತೃಪ್ತರು..
ಜೆಡಿಎಸ್ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹುಣಸೂರು ಕ್ಷೇತ್ರದ ಶಾಸಕ ಹೆಚ್ ವಿಶ್ವನಾಥ್ ಅವರನ್ನು ಸೆಳೆಯಲು, ಬಿಜೆಪಿ ತೆರೆಮರೆಯ ಹಿಂದೆ ಕಸರತ್ತು ನಡೆಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಇರುವ ಅಸಮಾಧಾನ ಹಾಗೂ ಜೆಡಿಎಸ್ನಲ್ಲಿ ಸಚಿವ ಸ್ಥಾನ ನೀಡದಿರುವುದಕ್ಕೆ ಇರುವ ಬೇಸರದ ಲಾಭ ಪಡೆದು, ರಾಜಕಾರಣದಲ್ಲಿ ಹಿರಿತನದ ಅನುಭವ ಇರುವ ವಿಶ್ವನಾಥ್ ಸೆಳೆಯುವ ಪ್ರಯತ್ನ ನಡೆಸಿದೆ.
ಬಿಜೆಪಿ ಸಂಸದರಾಗಿರುವ ಮಾಜಿ ಕೇಂದ್ರ ಸಚಿವ ವಿ ಶ್ರೀನಿವಾಸ ಪ್ರಸಾದ್ ಮೂಲಕ ಹಳ್ಳಿಹಕ್ಕಿಗೆ ಕಮಲ ಪಕ್ಷ ಬಲೆ ಬೀಸಿದೆ ಎನ್ನಲಾಗುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಶಾಸಕರಾದ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ಶಾಸಕ ನಾರಾಯಣ ಗೌಡ, ಮಾಗಡಿ ಶಾಸಕ ಎ.ಮಂಜು, ಟಿ ನರಸೀಪುರ ಶಾಸಕ ಅಶ್ವಿನ್ ಕುಮಾರ್, ಕೋಲಾರ ಶಾಸಕ ಶ್ರೀನಿವಾಸಗೌಡ, ಬೆಂಗಳೂರಿನ ದಾಸರಹಳ್ಳಿಯ ಮಂಜುನಾಥ್ ಗೌಡ ಅವರ ಮೇಲೂ ಬಿಜೆಪಿ ಕಣ್ಣು ಹಾಕಿದೆ ಎಂದು ತಿಳಿದುಬಂದಿದೆ.
ಸಚಿವ ಜಿ ಟಿ ದೇವೇಗೌಡಗೂ ಮನವೊಲಿಕೆ ..?
ಬಿಜೆಪಿಯಲ್ಲಿದ್ದು ಕೆಹೆಚ್ಬಿ ಅಧ್ಯಕ್ಷರಾಗಿದ್ದ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಮೇಲೂ ಬಿಜೆಪಿ ಕಣ್ಣು ಹಾಕಿದ್ದು, ಪಕ್ಷಕ್ಕೆ ಬರಲು ಆಫರ್ ನೀಡಿದೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣೆಯಲ್ಲಿ ಭರವಸೆ ನೀಡಿದಂತೆ, ಇಂಧನ ಹಾಗೂ ಲೋಕೋಪಯೋಗಿ ಇಲಾಖೆಯಂತಹ ಪ್ರಮುಖ ಖಾತೆ ನೀಡದೆ ಇರುವ ಬಗ್ಗೆ ಹಾಗೂ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಹಸ್ತಕ್ಷೇಪದಿಂದ ಸಚಿವ ಜಿ ಟಿ ದೇವೇಗೌಡ ಬೇಸತ್ತಿದ್ದಾರೆ. ಇದರ ಮರ್ಮ ಅರಿತ ಬಿಜೆಪಿ ಜಿಟಿಡಿಗೂ ಗಾಳ ಹಾಕಿದೆ. ಆದರೆ, ದೇವೇಗೌಡರು ಹಿಂದೇಟು ಹಾಕುತ್ತಿದ್ದು, ತಮ್ಮ ಮಗನನ್ನು ಕಳಿಸಿಕೊಡುವ ಬಗ್ಗೆ ಆಸಕ್ತಿ ಹೊಂದಿದ್ದಾರೆಂದು ಹೇಳಲಾಗುತ್ತಿದೆ.
ರಾಮಲಿಂಗಾರೆಡ್ಡಿಗೂ ಆಫರ್...?
ಜೆಡಿಎಸ್ ಪಕ್ಷದ ಶಾಸಕರು ಮಾತ್ರವಲ್ಲ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನೂ ಸೆಳೆಯಲು ಬಿಜೆಪಿ ತೆರೆಮರೆಯಲ್ಲಿ ಪ್ರಯತ್ನ ನಡೆಸಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕರಾದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಆಹ್ವಾನ ನೀಡಿದೆ ಎನ್ನಲಾಗುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾನ ಇದ್ದರೂ, ರಾಮಲಿಂಗಾರೆಡ್ಡಿ ಪಕ್ಷ ತೊರೆಯಲು ಆಸಕ್ತಿ ತೋರಿಲ್ಲ ಎನ್ನಲಾಗಿದೆ. ತಮ್ಮ ಬದಲಿಗೆ ಜಯನಗರ ಶಾಸಕಿಯಾದ ಪುತ್ರಿ ಸೌಮ್ಯರೆಡ್ಡಿ ಅವರನ್ನು ಬಿಜೆಪಿಗೆ ಕಳಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ನ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅವರ ತಂಡದ ಶಾಸಕರನ್ನೂ ವಿಶ್ವಾಸಕ್ಕೆ ತಗೆದುಕೊಂಡು, ಉಳಿದ ಶಾಸಕರ ಆಪರೇಷನ್ಗೆ ಬಿಜೆಪಿ ಒಲವನ್ನು ಹೊಂದಿದೆ ಎನ್ನಲಾಗಿದೆ. ಪಕ್ಷದ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟ ತಕ್ಷಣ ಶಾಸಕರ ಆಪರೇಷನ್ ನಡೆದು ಮೈತ್ರಿ ಸರ್ಕಾರ ಪತನಗೊಳಿಸುವ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ.