ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಸುರೇಶ್ ರೈನಾ ಮೈದಾನಕ್ಕೆ ಬರುತ್ತಿದ್ದಂತೆ ಅಭಿಮಾನಿವೋರ್ವ ರೈನಾರನ್ನ ಅಪ್ಪಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತಿರೇಕದ ಅಭಿಮಾನ ಪ್ರದರ್ಶಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಎಪ್ರಿಲ್ 21 ರಂದು ನಡೆದಿದ್ದ ಐಪಿಲ್ ಪಂದ್ಯದಲ್ಲಿ ಚೆನ್ನೈ ಆಟಗಾರ ಸುರೇಶ್ ರೈನಾ ಮೈದಾನಕ್ಕೆ ಬರುತ್ತಿದ್ದಂತೆ ಗ್ಯಾಲರಿಯಲ್ಲಿ ಕುಳಿತಿದ್ದ ಬೆಂಗಳೂರಿನ ಅರುಣ್ ಕುಮಾರ್ ಎಂಬ ಅಭಿಮಾನಿ ರೈನಾರನ್ನ ಅಪ್ಪಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹುಚ್ಚಾಟ ಪ್ರದರ್ಶಿಸಿದ್ದ.
![Suresh Raina fan](https://etvbharatimages.akamaized.net/etvbharat/prod-images/3193957_fdafsdvf.jpg)
ರೈನಾ ಗ್ರೌಂಡ್‌ಗೆ ಬರುತ್ತಿದ್ದಂತೆ ಅರುಣ್ ಕುಮಾರ್ ಮೊದಲು ರೈನಾರನ್ನ ಮಾತನಾಡಿಸಲು ಯತ್ನಿಸಿದ್ದ. ನಂತರ ಗ್ಯಾಲರಿಯಲ್ಲಿ ಕುಳಿತವನು ಪಂದ್ಯ ನಡೆಯುತ್ತಿರುವಾಗಲೇ ಮೈದಾನಕ್ಕೆ ನುಗ್ಗಿ ಸುರೇಶ್ ರೈನಾರನ್ನ ಅಪ್ಪಿಕೊಂಡಿದ್ದ. ಅರುಣ್ ಕುಮಾರ್ನ ಈ ಹುಚ್ಚು ಅಭಿಮಾನ ಕಂಡು ರೈನಾ ಹೌಹಾರಿದ್ದರು. ತಕ್ಷಣ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದರು.
ಈ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ರೋಹಿತ್ ಕುಮಾರ್ ಎಂಬುವರು ನೀಡಿದ ದೂರಿನ ಹಿನ್ನೆಲೆ ಅರುಣ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 447ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆತನಿಗೆ ಬುದ್ದಿ ಹೇಳಿದ್ದು, ಇದೀಗ ಜಾಮೀನು ಪಡೆದು ಹೊರ ಬಂದಿದ್ದಾನೆ.