ಬೀದರ್: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಗ್ರಾಮಕ್ಕೆ ಆಗಮಿಸಿದ ಯೋಧರೋಬ್ಬರಿಗೆ ಅದ್ಧೂರಿ ಮೆರವಣಿಗೆ ನಡೆಸಿ, ಭವ್ಯ ಸ್ವಾಗತ ನೀಡಿದ ಪ್ರಸಂಗ ಗೋರ್ಟಾ(ಬಿ) ಗ್ರಾಮದಲ್ಲಿ ನಡೆದಿದೆ.
ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಂಜೀವಕುಮಾರ ಶಾಲಿವಾನ ಪಟ್ನೆ ಎಂಬ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಗ್ರಾಮದ ಬಸವ ಮಂಟಪ ಬಳಿ ಭವ್ಯ ಸ್ವಾಗತಿ ನೀಡಿ ಬರ ಮಾಡಿಕೊಂಡ ಗ್ರಾಮಸ್ಥರು, ಅಲ್ಲಿಂದ ಪ್ರಮುಖ ಬಿದಿಗಳ ಮೂಲಕ ಗ್ರಾಮದ ಮಹಾದೇವ ಮಂದಿರದವರೆಗೆ ಮೆರವಣಿಗೆ ನಡೆಸಿದರು.
ಸೇನೆಯ ಸಮವಸ್ತ್ರದಲ್ಲಿದ್ದ ಯೋಧನಿಗೆ ಫಲಪುಷ್ಪಗಳಿಂದ ವಿಶೇಷ ಅಲಂಕೃತ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ ಗ್ರಾಮಸ್ಥರು, ಸೈನಿಕನ ಸೇವೆಗೆ ಗೌರವ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ಗ್ರಾಮದ ಯುವಕರು ಮತ್ತು ಪ್ರಮುಖರು ದೇಶ ಭಕ್ತಿ ಗೀತೆಗಳಿಗೆ ಉತ್ಸಾಹದಿಂದ ಹೆಜ್ಜೆ ಹಾಕಿ ಹರ್ಷ ವ್ಯಕ್ತಪಡಿಸಿದರು.
ಮೆರವಣಿಗೆ ಸಾಗುವ ಮಾರ್ಗದ ರಸ್ತೆ ಬದಿ ನಿಂತಿದ್ದ ಗ್ರಾಮದ ಮಹಿಳೆಯರು ಸೇರಿದಂತೆ ಪ್ರಮುಖರು ಸೈನಿಕನ ಮೇಲೆ ಹೂಗಳನ್ನು ಹಾಕಿದರು. ನಂತರ ಗ್ರಾಮದ ಮಹಾದೇವ ಮಂದಿರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸೈನಿಕನಿಗೆ ಪೂಜ್ಯರು ಸೇರಿದಂತೆ ಗ್ರಾಮದ ಪ್ರಮುಖರು ಸನ್ಮಾನಿಸಿ ಗೌರವಿಸಿದರು.