ಬೀದರ್ : ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಅವರು ವಸತಿ ಯೋಜನೆ ದುರ್ಬಳಕೆ ಮಾಡಿಕೊಂಡು ಭಾಲ್ಕಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹೈ-ಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದ್ದು, ಅವರ ಶಾಸಕ ಸ್ಥಾನ ರದ್ದುಗೊಂಡು ಭಾಲ್ಕಿ ವಿಧಾನಸಭೆ ಉಪಚುನಾವಣೆ ನಡೆಯುವುದು ಗ್ಯಾರಂಟಿ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಡಿ.ಕೆ ಸಿದ್ರಾಮ್ ಹೇಳಿದ್ದಾರೆ.
ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಸುಮಾರು 26,000 ಮನೆಗಳನ್ನು ರಾಜೀವ್ ಗಾಂಧಿ ವಸತಿ ನಿಗಮದ ಅಡಿ ಅಧಿಕಾರಿಗಳಿಂದ ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಬಳಸಿಕೊಂಡು ತಮ್ಮ ಆಪ್ತ ಸಹಾಯಕರ ಮೂಲಕ ಭಾಲ್ಕಿ ಕ್ಷೇತ್ರದ ಬಡವರ ಮನೆಗಳು ಶ್ರೀಮಂತರಿಗೆ ಕಾನೂನು ಬಾಹಿರವಾಗಿ ಹಂಚಿಕೆ ಮಾಡಿರುವುದು ಸಾಬೀತಾಗಿದೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತನ್ನ ಮನೆಯ ಮುಂದೆ ಪೆಂಡಾಲ್ ಹಾಕಿ ಸರ್ಕಾರದ ಜವಾಬ್ದಾರಿ ಸಚಿವ ಸ್ಥಾನದಲ್ಲಿದ್ದುಕೊಂಡು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಕ್ರಮ ನಡೆಸಿದ್ದರಿಂದ ಪ್ರಕರಣದಲ್ಲಿ ಮೊದಲನೇ ಆರೋಪಿ ಈಶ್ವರ ಖಂಡ್ರೆ ಆಗಲಿದ್ದಾರೆ. ನನ್ನ ಸೋಲಿಗೆ ವಸತಿ ಯೋಜನೆ ಅಡಿ ಮನೆ ಹಂಚಿಕೆ ಮಾಡಿ ಮತದಾರರನ್ನು ದಾರಿ ತಪ್ಪಿಸಿದ್ಧೇ ಕಾರಣವಾಗಿದೆ ಎಂದು ಡಿ.ಕೆ ಸಿದ್ರಾಮ್ ಆರೋಪಿಸಿದ್ದಾರೆ.
ಈ ವರ್ಷದ ಅಂತ್ಯದೊಳಗಾಗಿ ಭಾಲ್ಕಿ ಜನರು ಉಪ ಚುನಾವಣೆ ಕಾಣಬೇಕಾಗುತ್ತೆ. ಅಕ್ರಮವಾಗಿ ಶಾಸಕರಾಗಿರುವ ಈಶ್ವರ ಖಂಡ್ರೆ ಅವರ ಶಾಸಕ ಸ್ಥಾನ ರದ್ದಾಗಲಿದ್ದು, ಜನರ ಮುಂದೆ ನಾವೇ ಬರ್ತಿವಿ ಎಂದು ಡಿ.ಕೆ ಸಿದ್ರಾಮ್ ಹೇಳಿದ್ದಾರೆ.