ಬಸವಕಲ್ಯಾಣ(ಬೀದರ್): ಸಿಎಎ ಹಾಗೂ ಎನ್‌ಆರ್‌ಸಿಯನ್ನು ಬೆಂಬಲಿಸಿ, ರಾಷ್ಟ್ರೀಯ ಭಾವೈಕ್ಯತೆಗಾಗಿ ಎಬಿವಿಪಿಯ ವತಿಯಿಂದ, ನಗರದಲ್ಲಿ100 ಮೀಟರ್ ಉದ್ದದ ತಿರಂಗಾ ರ‍್ಯಾಲಿ ನಡೆಸಲಾಯಿತು. ನಗರದ ಮಡಿವಾಳ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ, ಮುಖ್ಯ ರಸ್ತೆಯ ಮಾರ್ಗವಾಗಿ ನಡೆದ ತಿರಂಗಾ ರ‍್ಯಾಲಿಯಲ್ಲಿ ಎಬಿವಿಪಿ ಪದಾಧಿಕಾರಿಗಳು, ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರ‍್ಯಾಲಿ ವೇಳೆ ಸಿಎಎ ಮತ್ತು ಎನ್‌ಆರ್‌ಸಿಗಳ ಪರ ಘೋಷಣೆ ಕೂಗಲಾಯಿತು. ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಮನವಿ ಪತ್ರವನ್ನು, ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ್ ಅವರಿಗೆ ಸಲ್ಲಿಸಲಾಯಿತು.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ ಮಾತನಾಡಿ, ಇತ್ತೀಚೆಗೆ ಈ ದೇಶದ ಅಭಿವೃದ್ಧಿಯನ್ನು ಸಹಿಸದ ಹಾಗೂ ಈ ದೇಶದ ಸಂವಿಧಾನವನ್ನು ಒಪ್ಪದ ಕೆಲವರು ಸಮಾಜದಲ್ಲಿ ಅಜಾದಿ ಹೆಸರಿನಲ್ಲಿ ಪ್ರತಿಭಟನೆ ಮಾಡುತಿದ್ದಾರೆ ಎಂದು ಆರೋಪಿಸಿದರು.
ಸಿಎಎ, ಎನ್‌ಆರ್‌ಸಿಯಿಂದ ದೇಶದಲ್ಲಿರುವ ಹಿಂದೂ ಮುಸ್ಲಿಂ ಸೇರಿದಂತೆ ಯಾವುದೇ ಧರ್ಮದ ಜನರಿಗೆ ತೊಂದರೆಯಾಗಲ್ಲ. ಅಕ್ರಮ ನುಸುಳುಕೋರರನ್ನು ಹೊರಹಾಕಲು ತಕ್ಷಣ ಕೇಂದ್ರ ಸರ್ಕಾರ ದೇಶದಾದ್ಯಂತ ಎನ್‌ಆರ್‌ಸಿ ಜಾರಿಗೆ ತರಬೇಕು. ದೇಶದಲ್ಲಿ ಅಕ್ರಮವಾಗಿ ಹಣ ಪಡೆದು ಸಮಾಜ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ, ದೇಶದ್ರೋಹಿ ಸಂಘಟನೆಗಳನ್ನು ತಕ್ಷಣ ನಿಷೇಧಿಸಬೇಕು ಎಂದು ಒತ್ತಾಯಿಸಿದರು.