ಬಸವಕಲ್ಯಾಣ: ತನ್ನ ಭಾವಿ ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಗೆಳೆಯನನ್ನು ಯುವಕನೋರ್ವ ಕೊಲೆ ಮಾಡಿದ್ದ ಪ್ರಕರಣವನ್ನು ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಪೊಲೀಸರು ಭೇದಿಸಿದ್ದಾರೆ.
ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಪೂರ ರಸ್ತೆಯಲ್ಲಿರುವ ಅರಫತ್ ಕಾಲೊನಿಯ ಸೈಯದ್ ಬಾಬಾ (೨೨) ಬಂಧಿತ. ಡಿ. 4ರಂದು ನಗರದ ಹರಳಯ್ಯ ಗವಿ ಮುಂಭಾಗದಲ್ಲಿಯ ಖಾಸಗಿ ಲೇಔಟ್‌ನಲ್ಲಿ ಶಾ ಬಡಾವಣೆ ನಿವಾಸಿ ಅಲ್ಲಾವುದ್ದೀನ್ ಇಸ್ಮಾಯಿಲ್ ಎಂಬ ಯುವಕನಿಗೆ ಕುತ್ತಿಗೆ ಹಾಗೂ ಹೊಟ್ಟೆ ಭಾಗದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಕೊಲೆ ನಂತರ ಆರೋಪಿ ತಲೆಮರೆಸಿಕೊಂಡಿದ್ದ. ಈ ಕುರಿತು ಬಸವಕಲ್ಯಾಣ ಠಾಣೆ ಪೊಲೀಸರು ಪ್ರಕರಣ ದಾಖಲಾಗಿತ್ತು. ಸಿಪಿಐ ಮಲ್ಲಿಕಾರ್ಜುನ ಯಾತನೂರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಸುನಿಲಕುಮಾರ ನೇತೃತ್ವದ ತಂಡ ಸದ್ಯ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕೊಲೆಗೆ ಕಾರಣ:
ಆರೋಪಿ ಯುವಕ ಸೈಯದ್ ಬಾಬಾನ ಭಾವಿ ಪತ್ನಿ ಬಗ್ಗೆ ಕೊಲೆಯಾದ ಯುವಕ ಅಸಭ್ಯವಾಗಿ ಮಾತನಾಡಿದ್ದೇ ಕೊಲೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆಯಾದ ಅಲ್ಲಾವುದ್ದೀನ್ ಹಾಗೂ ಆರೋಪಿ ಸೈಯದ್ ಬಾಬಾ ಆತ್ಮಿಯ ಗೆಳೆಯರಾಗಿದ್ದರು. ಕೆಲಸ ಸೇರಿದಂತೆ ಇತರ ಯಾವುದೇ ಕಾರ್ಯಗಳಿಗಾಗಿ ಎಲ್ಲೇ ಹೋದ್ರು ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಕಳೆದ ನಾಲ್ಕು ತಿಂಗಳ ಹಿಂದೆ ಸೈಯದ್ ಬಾಬಾಗೆ ನಿಶ್ಚಿತಾರ್ಥ ಮಾಡಲಾಗಿತ್ತು.
ಆದ್ರೆ, ನಿಶ್ಚಿತಾರ್ಥವಾದ ನಂತರ ಆರೋಪಿ ಸೈಯದ್ ಬಾಬಾನ ಭಾವಿ ಪತ್ನಿ ಬಗ್ಗೆ ಕೊಲೆಯಾದ ಅಲ್ಲಾವುದ್ದೀನ್ ಅಶ್ಲೀಲವಾಗಿ ಮಾತನಾಡುತ್ತಿದ್ದ. ಇದರಿಂದ ರೋಸಿಹೊಗಿದ್ದ ಸೈಯದ್ ಬಾಬಾ, ಹೇಗಾದರು ಮಾಡಿ ಇತನ ಕಥೆ ಮುಗಿಸಿಯೇ ಬಿಡಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದ. ಕೊಲೆಗಾಗಿ ಸಂಚು ರೂಪಿಸಿ, ಡಿ. 4 ರಂದು ಸಂಜೆ ಮದ್ಯ ಕುಡಿಸಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.