ಬಸವಕಲ್ಯಾಣ: ದಸರಾ ಹಬ್ಬದ ನಿಮಿತ್ತ ಅಂಬಾ ಭವಾನಿ ದರ್ಶನಕ್ಕೆಂದು ಮಹಾರಾಷ್ಟ್ರದ ತುಳಜಾಪುರಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ಬೀದರ್ ಜಿಲ್ಲೆ ಸೇರಿದಂತೆ ಈ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ತೆರಳುವ ಭಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಲ್ಲಿಯ ಸಾರಿಗೆ ಸಂಸ್ಥೆಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.
ಇಲ್ಲಿಯ ಸಸ್ತಾಪುರ ಬಂಗ್ಲಾ ಬಳಿ ತಾತ್ಕಾಲಿಕ ಕಂಟ್ರೋಲ್ ಪಾಯಿಂಟ್ ಸ್ಥಾಪಿಸಲಾಗಿದ್ದು, ತುಳಜಾಪುರಕ್ಕೆ ತೆರಳುವ ಪ್ರತಿಯೊಂದು ಬಸ್‌ಗಳನ್ನು ಇಲ್ಲಿಂದಲೇ ಬಿಡಲಾಗುತ್ತಿದೆ. ದೇವಿ ದರ್ಶನಕ್ಕೆಂದು ತೆರಳುವ ಯಾತ್ರಾರ್ಥಿಗಳ ಸುರಕ್ಷತೆ ದೃಷ್ಠಿಯಿಂದ ಸಾರಿಗೆ ಬಸ್ಸಿನ ಸೌಲಭ್ಯ ಕಲ್ಪಿಸಲಾಗಿದೆ. ಯಾತ್ರಾರ್ಥಿಗಳು ಖಾಸಗಿ ವಾಹನಗಳಲ್ಲಿ ತೆರಳಬಾರದು ಎಂದು ಸ್ಥಳದಲ್ಲಿ ಠಿಕಾಣಿ ಹೂಡಿರುವ ಸಾರಿಗೆ ನೌಕರರು ಪ್ರಯಾಣಿಕರಿಗೆ ಜಾಗೃತಿ ಮೂಡಿಸುತಿದ್ದಾರೆ.
ತುಳಜಾಪುರ ಯಾತ್ರೆಗೆಂದು ಜಿಲ್ಲೆಯಿಂದ ನೂರಕ್ಕೂ ಅಧಿಕ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಬಸವಕಲ್ಯಾಣ ಘಟಕದಿಂದ 25ಕ್ಕೂ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗದಿಂದ ದೇವಿ ದರ್ಶನಕ್ಕಾಗಿ ತುಳಜಾಪುರಕ್ಕೆ ತೆರಳುವ ಭಕ್ತರು 50 ಜನ ಒಂದೆಡೆ ಸೇರಿ ಒಂದು ಫೋನ್ ಕಾಲ್ ಮಾಡಿದರೆ ಸಾಕು. ಅವರು ಇರುವ ಸ್ಥಳಕ್ಕೆ ತೆರಳಿ ಸೇವೆ ನೀಡಲಾಗುವುದು. ಹೀರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ ಎಂದು ಸಂಸ್ಥೆ ಸ್ಥಳೀಯ ಘಟಕ ವ್ಯವಸ್ಥಾಪಕ ಶ್ರೀಮಂತ ಘಂಟೆ ತಿಳಿಸಿದ್ದಾರೆ.
ಈ ನಡುವೆ ಜೀಪ್, ಕ್ರೂಸರ್ ಸೇರಿದಂತೆ ಇತರ ಖಾಸಗಿ ವಾಹನಗಳು ಸಹ ಇದೇ ಸ್ಥಳದಲ್ಲಿ ನಿಂತು ಕಡಿಮೆ ದರದಲ್ಲಿ ಯಾತ್ರೆಗೆ ಕರೆದುಕೊಂಡು ಹೊಗಲಾಗುವುದು ಎಂದು ಪ್ರಯಾಣಿಕರಿಗೆ ಆಮಿಷ ಒಡ್ಡುವ ಮೂಲಕ ಪ್ರಯಾಣಿಕರನ್ನು ತಮ್ಮತ್ತ ಸೆಳೆಯುವ ಕಸರತ್ತು ನಡೆಸಿವೆ.