ಬಸವಕಲ್ಯಾಣ : ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಮೂರು ದಿನ ನಡೆಯುವ ಶ್ರೀ ಸದ್ಗುರು ಚೆನ್ನಬಸವ ಶಿವಯೋಗಿಗಳ 6 ನೇ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.
ಭಕ್ತ ಸಮೂಹದ ಮಧ್ಯೆ ಅದ್ಧೂರಿ ರಥೋತ್ಸವ ಜರುಗಿದ್ದು, ಶ್ರೀ ಚನ್ನಬಸವ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ ಬಳಿಕ ಶಿವಯೋಗಿಗಳ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮೆರವಣಿಗೆ ಮಠದಿಂದ ಆರಂಭವಾಗಿ ದಾವುಲ್ ಮಲ್ಲಿಕ್‌ಸಾಬ್ ಬಾಬಾ ದರ್ಗಾದ ಮೂಲಕ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿ, ಮಠಕ್ಕೆ ತಲುಪಿತು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಜನಾ ತಂಡದವರು ಮೆರವಣಿಗೆಯುದ್ದಕ್ಕೂ ಶ್ರೀಗಳ ಕುರಿತು ಗಾಯನ ಪ್ರಸ್ತುತ ಪಡಿಸಿದರು. ಪುರವಂತರಿಂದ ನಡೆದ ಪ್ರದರ್ಶನ, ಡೊಳ್ಳು ತಂಡದವರಿಂದ ನಡೆದ ಪ್ರದರ್ಶನ ಪಲ್ಲಕ್ಕಿ ಮೆರವಣಿಗೆಗೆ ಮೆರಗು ನೀಡಿದವು.
ಪಲ್ಲಕ್ಕಿ ಮೆರವಣಿಗೆ ನಂತರ ಶ್ರೀ ಮಠದಲ್ಲಿ ರಥೋತ್ಸವ ಸಾಂಸ್ಕೃತಿಕ ವೈಭವದೊಂದಿಗೆ ಅದ್ಧೂರಿಯಾಗಿ ಜರುಗಿತು. ಮಠದ ಪೀಠಾಧಿಪತಿಗಳಾದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ವಿಶೇಷ ಪೂಜೆ ಸಲ್ಲಿಸುವದರೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮಕ್ಕೆ ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಭಕ್ತ ಸಮೂಹ ರಥೋತ್ಸವಕ್ಕೆ ಸಾಕ್ಷಿಯಾದರು.
ಬಳಿಕ ರಶ್ರೀ ಡಾ. ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ಶಿವಾನುಭ ಚಿಂತನೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಶ್ರೀ ಡಾ. ಮುರಘರಾಜೇಂದ್ರ ಮಹಾಸ್ವಾಮೀಜಿ ಉದ್ಘಾಟಿಸಿದ್ದು, ಮಹಾರಾಷ್ಟ್ರದ ಸೋಲ್ಲಾಪೂರ ಸಂಸದ ಪೂಜ್ಯ ಶ್ರೀ ಡಾ. ಜಯಸಿದ್ದೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.
ಬೀದರ ಸಂಸದ ಭಗವಂತ ಖೂಬಾ, ಸ್ಥಳೀಯ ಶಾಸಕ ಬಿ.ನಾರಾಯಣರಾವ, ಆಳಂದ ಶಾಸಕ ಶುಭಾಷ ಗುತ್ತೆದಾರ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮುಡ್, ಕಲಬುರಗಿ ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ ಸೇರಿದಂತೆ ಪೂಜ್ಯರು, ವಿವಿಧ ಪಕ್ಷದ ರಾಜಕೀಯ ಮುಖಂಡರು, ಗಣ್ಯರು ಭಾಗವಹಿಸಿದ್ದರು. ಜಾತ್ರಾ ಮಹೋತ್ಸವದ ನಿಮಿತ್ತ ಜಿಲ್ಲೆಯ ನಾನಾ ಕಡೆಗಳಿಂದ ಆಗಮಿಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಬಿಗಿ ಭದ್ರತೆ ಒದಗಿಸಿದರು.