ಬಸವಕಲ್ಯಾಣ: ತಾಲೂಕಿನ ಮಂಠಾಳ, ಮುಡಬಿ ಸೇರಿದಂತೆ ಕೆಲ ಭಾಗದಲ್ಲಿ ಬಿರುಗಾಳಿ ಸಹಿತ ಅಕಾಲಿಕ ಮಳೆ ಸುರಿದಿದ್ದು, ಪರಿಣಾಮ ವಿದ್ಯುತ್ ಕಂಬಗಳು ಸೇರಿದಂತೆ ಹಲವು ಮರ ಗಿಡಗಳು ಧರೆಗುರುಳಿವೆ.
ಸಂಜೆ 4ರ ಸುಮಾರಿಗೆ ಭಾರಿ ಬಿರುಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಮಂಠಾಳ ಗ್ರಾಮದ ಸರ್ಕಾರಿ ಎಂಪಿಎಸ್ ಶಾಲೆ ಆವರಣದ ಬಳಿಯ 3, ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ 1 ವಿದ್ಯುತ್ ಕಂಬ ಸೇರಿದಂತೆ ಗ್ರಾಮದ ವ್ಯಾಪ್ತಿಯಲ್ಲಿಯ ಸುಮಾರು 15 ವಿದ್ಯುತ್ ಕಂಬಗಳು ಹಾಗೂ ಎರಡು ವಿದ್ಯುತ್ ಪರಿವರ್ತಕಗಳು ನೆಲಕ್ಕೆ ಮುರಿದು ಬಿದ್ದಿವೆ.
ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾರಣ ಮಂಠಾಳ ಗ್ರಾಮ ಸೇರಿದಂತೆ ಸುತ್ತಲಿನ ಕೆಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ್ಯ ಉಂಟಾಗಿದ್ದು, ತಕ್ಷಣ ಕಾರ್ಯಪ್ರವರ್ತರಾದ ಜೆಸ್ಕಾಂ ವಿಭಾಗದ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಶ್ರಮಿಸಿದ್ದಾರೆ.
ಬಿರುಗಾಳಿಯ ಪರಿಣಾಮ ಎತ್ತೊಂದರ ಮೇಲೆ ಮರ ಉರುಳಿದ ಪರಿಣಾಮ ಎತ್ತಿನ ಸೊಂಟ ಮುರಿದುಹೋಗಿದ್ದು. ಶಾಲೆ ಪಕ್ಕದ ಬಿಸಿಯೂಟ ಕೋಣೆ, ಶೌಚಾಲಯ ಹಾಗೂ ಆಸ್ಪತ್ರೆ ಬಳಿಯ ಮನೆಯೊಂದರ ಮೇಲೆ ಮರಗಳು ಬಿದ್ದು ಕಟ್ಟಡಗಳಿಗೆ ಹಾನಿಯಾಗಿದೆ.