ಬೀದರ್: ಸುಮಾರು ಎರಡು ನೂರು ಅಡಿ ಉದ್ದದ ಕಂಬವನ್ನು ಇಳಿಸಿ ಅದಕ್ಕೆ ಹೊಸ ಬಟ್ಟೆ ಹಾಕಿ ಮತ್ತೆ ಮೇಲಕ್ಕೇರಿಸುವ ಸಾಂಪ್ರದಾಯಿಕ ಉತ್ಸವಕ್ಕೆ ಕೊರೊನಾ ಎಫೆಕ್ಟ್ನಿಂದಾಗಿ ಬ್ರೇಕ್ ಹಾಕಲಾಗಿದೆ.
ಜಿಲ್ಲೆಯ ಔರಾದ್ ತಾಲೂಕಿನ ಚಿಂತಾಕಿ ಗ್ರಾಮದಲ್ಲಿ ಪ್ರತಿವರ್ಷ ಯುಗಾದಿ ಸಂದರ್ಭದಲ್ಲಿ ಶೇಖ್ ಸಾಹೀಬ್ ದರ್ಗಾದ ಉದ್ದದ ಕಂಬವನ್ನು ಕೆಳಗಿಳಿಸಿ ಅದಕ್ಕೆ ಹಾಕಲಾಗುವ ಧ್ವಜ ಹಾಗೂ ಬಟ್ಟೆಗಳನ್ನು ಬದಲಾಯಿಸುವ ಪದ್ದತಿ ಇದೆ. ಇದು ಈ ಭಾಗದ ಅಪರೂಪದ ಉತ್ಸವಗಳಲ್ಲಿ ಒಂದು. ಈ ಕಾರ್ಯಕ್ಕೆ ಬರೋಬ್ಬರಿ 800 ರಿಂದ 1000 ಜನರು ಬೇಕಾಗ್ತಾರೆ. ವಿವಿಧ ಭಾಗಗಳಿಂದ ಸಾವಿರಾರು ಜನರು ಈ ಕ್ಷಣವನ್ನು ನೋಡಲು ಬಂದು ಶೇಖ್ ಸಾಹಿಬ್ ದರ್ಗಾದ ಸನ್ನಿಧಿಗೆ ತಲೆ ಬಾಗ್ತಾರೆ.
ಆದರೆ, ಕೊವಿಡ್-19 ವೈರಾಣು ನಿಯಂತ್ರಣಕ್ಕಾಗಿ ಹೇರಲಾದ ಲಾಕ್ಡೌನ್ನಿಂದಾಗಿ ಯುಗಾದಿ ಸಂಧರ್ಭದಲ್ಲಿ ಈ ಕಾರ್ಯ ಮಾಡಲಿಕ್ಕಾಗಿಲ್ಲ. ಆದರೆ, ಈ ಬಾರಿ ಜಿಲ್ಲೆಯಾದ್ಯಂತ ಮಳೆಯಾಗಿದೆ. ಚಿಂತಾಕಿ ಭಾಗದಲ್ಲಿ ಮಳೆಯಾಗಿಲ್ಲ. ಹೀಗಾಗಿ ಗ್ರಾಮಸ್ಥರು ಗ್ರಾಮ ದೇವತೆಯ ಈ ಪ್ರತೀತಿ ಮಾಡಿಲ್ಲ. ಅದಕ್ಕಾಗಿ ಹೀಗಾಗಿರಬೇಕು ಎಂದು ನಂಬಿದ್ದಾರೆ. ಈಗ ಲಾಕ್ಡೌನ್ ತೆರವಾಗಿದೆ. ಸಾಂಪ್ರದಾಯಿಕ ಪ್ರತೀತಿ ಮಾಡ್ತೀವಿ ಎಂದು ಎಲ್ಲಾ ತಯಾರಿಗಳು ಮಾಡಿಕೊಂಡಿದ್ದರು. ಇದಕ್ಕಾಗಿ ತಹಶೀಲ್ದಾರರಿಗೆ ಮನವಿ ಕೂಡ ಮಾಡಿದ್ದರು.
ಆದರೆ, ತಹಶೀಲ್ದಾರರು ಕೇವಲ 50 ಜನರ ಅನುಮತಿ ನೀಡಿದ್ದರು. ಈ ಕಾರ್ಯಕ್ಕೆ ಕಮ್ಮಿ ಅಂದ್ರೂ 500 ಜನ ಬೇಕು. ಹೀಗಾಗಿ ಏನಾದ್ರೂ ಮಾಡಬೇಕು ಎಂದು ಮುಂದಾದಾಗ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಕೊರೊನಾ ನಿಯಂತ್ರಣದ ನಿಯಮ ಮೀರಿ ಕಾರ್ಯ ಮಾಡಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿದ ಮೇಲೆ ಗ್ರಾಮಸ್ಥರು ಸುಮ್ಮನಾಗಿದ್ದಾರೆ.