ಬೀದರ್: ಪಟ್ಟಣ ಪಂಚಾಯತ್ ಮೂವರು ಸದಸ್ಯರು ಸೇರಿದಂತೆ ಜಿ.ಪಂ. ಸದಸ್ಯೆ ಹಾಗೂ ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಹಿರಂಗ ಸಮಾವೇಶ ಮಾಡುವ ಮೂಲಕ ಬಿಜೆಪಿ ಸೇರ್ಪಡೆಯಾದರು.
ಜಿಲ್ಲೆಯ ಔರಾದ್ ಪಟ್ಟಣದಲ್ಲಿ ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯೆ ಸಂಧ್ಯಾರಾಣಿ ರಾಮ, ಪಟ್ಟಣ ಪಂಚಾಯತ್ ಸದಸ್ಯ ಧೋಂಡಿಬಾ ನರೋಟೆ, ರಾಧಾಬಾಯಿ ಕೃಷ್ಣ ಹಾಗೂ ಗುಂಡಪ್ಪ ಮುದಾಳೆ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ರವರ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಕನ್ನಡಾಂಬೆ ವೃತ್ತದವರೆಗೆ ಬೈಕ್ ಮೆರವಣಿಗೆ ನಡೆಸಿ ನಂತರ ತೆರೆದ ವಾಹನದಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದವರೆಗೆ ಬೃಹತ್ ಶಕ್ತಿ ಪ್ರದರ್ಶನ ಮಾಡಿದರು. ಈ ವೇಳೆಯಲ್ಲಿ ಸಚಿವರಿಗೆ 5 ಕ್ವಿಂಟಲ್ ಹಣ್ಣಿನ ಮಾಲೆಯನ್ನು ಕ್ರೇನ್ ಮೂಲಕ ಹಾಕುವುದರೊಂದಿಗೆ ಸನ್ಮಾನಿಸಲಾಯಿತು.
ಕೊರೊನಾ ನಿಯಮ ಉಲ್ಲಂಘನೆ:
ಇಂದು ನಡೆದ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಯಾವುದೇ ಸಾಮಾಜಿಕ ಅಂತರವಾಗಲಿ, ಮಾಸ್ಕ್ ಧರಿಸದೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.