ಬೀದರ್: ನಾನು ಬಿಜೆಪಿ ಸೇರ್ತಿನಿ ಅಂತ ಎಲ್ಲಿಯೂ ಹೇಳಿಲ್ಲ. ಬಿಜೆಪಿಯ ಯಾವ ನಾಯಕರ ಮನೆ ಬಾಗಿಲಿಗೂ ಹೋಗಿಲ್ಲ. ಇದೆಲ್ಲದಕ್ಕೆ ಸಮಯ ಬಂದಾಗ ಸಮಯವೇ ಉತ್ತರ ಕೊಡುತ್ತೆ ಎಂದು ಮಾಜಿ ಸಚಿವ ಹುಮ್ನಾಬಾದ್ ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ್ ಹೇಳಿದ್ಧಾರೆ.
ನಗರದ ರಂಗ ಮಂದಿರದಲ್ಲಿ ಬಿದರಿ ಸಾಂಸ್ಕೃತಿಕ ವೇದಿಕೆ ಸಮಾರಂಭದಲ್ಲಿ ಪಾಲ್ಗೊಂಡು ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸೇರ್ತಿನಿ ಅಂತ ಜಿಲ್ಲೆಯಲ್ಲಿ ದೊಡ್ಡಮಟ್ಟದ ವದಂತಿ ಹರಡಿದೆ. ಆದರೆ ನಾನು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಅಥವಾ ಮಾಜಿ ಶಾಸಕ ಸುಭಾಷ ಕಲ್ಲೂರ ಮನೆಗೆ ಹೋಗಿದ್ದೆನಾ? ಎಲ್ಲಾದರೂ ಬಿಜೆಪಿಗೆ ಹೋಗ್ತಿನಿ ಅಂತ ಹೇಳಿದ್ದೇನಾ? ಹೋಗ್ತಿನಿ ಅಂತಾನು ಹೇಳಿಲ್ಲ ಹೋಗಲ್ಲ ಅಂತಾನೂ ಹೇಳಿಲ್ಲ. ಹೀಗಾಗಿ ಸಮಯ ಬಂದಾಗ ಸಮಯವೇ ಇದೆಲ್ಲದಕ್ಕೆ ಉತ್ತರ ನೀಡುತ್ತೆ ಎಂದರು.
ಕಲ್ಯಾಣ ಕರ್ನಾಟಕ ನಾಮಕರಣ ಮಾಡಿರುವುದು ಬಿಜೆಪಿ ಕೊಡುಗೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಹೇಳಿರುವುದಕ್ಕೆ ಟಾಂಗ್ ಕೊಟ್ಟ ಶಾಸಕ ರಾಜಶೇಖರ್ ಪಾಟೀಲ್, ಹೈದ್ರಾಬಾದ್ ಕರ್ನಾಟಕ ಭಾಗದ 30 ಶಾಸಕರು ಸಹಿ ಮಾಡಿದ ಪತ್ರವನ್ನು ಈ ಹಿಂದೆ ಮೈತ್ರಿ ಸರ್ಕಾರದ ಸಿಎಂ ಆಗಿದ್ಧಾಗಲೇ ಹೆಚ್ಡಿಕೆಗೆ ಸಲ್ಲಿಸಿದ್ದೇವೆ. ಕಲ್ಯಾಣ ಕರ್ನಾಟಕದ ಬುನಾದಿ ಹಾಕಿದ್ದು ನಾವು. ಅನಿವಾರ್ಯವಾಗಿ ಬಿಜೆಪಿ ಕಾಲದಲ್ಲಿ ಅನುಷ್ಢಾನವಾಗಿದೆ. ಹೀಗಾಗಿ ಪ್ರಭು ಚವ್ಹಾಣ ಈಗ ಹೇಳುವುದು ಸರಿಯಿಲ್ಲ. ಬೇಕಿದ್ದರೆ ಪ್ರಭು ಚವ್ಹಾಣ ಅವರು ಸಹಿ ಮಾಡಿದ ಕಡತ ಕೂಡ ಸಾರ್ವಜನಿಕಗೊಳಿಸಲು ಸಿದ್ಧ ಎಂದು ಪಾಟೀಲ್ ಸವಾಲು ಹಾಕಿದರು.