ಬೀದರ್: ನೆರೆಯ ಮಹಾರಾಷ್ಟ್ರ ದಿಂದ ಬಂದವರನ್ನು ಕ್ವಾರೆಂಟೈನ್ ಮಾಡಿದ ನಂತರ ಅವರ ಗಂಟಲು ದ್ರವ ಮಾದರಿ ಪರಿಕ್ಷೆ ಮಾಡುವ ವೇಳೆ ಜನರು ಸಾಮಾಜಿಕ ಅಂತರ ಕಾಪಾಡದೇ ಇರುವ ಘಟನೆ ಬೀದರ್ನಲ್ಲಿ ನಡೆದಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ಹೊರ ವಲಯದ ಡಿ.ದೇವರಾಜು ಅರಸ್ ವಸತಿ ನಿಲಯದಲ್ಲಿ ನೂರಾರು ಜನರು ಜಮಾಯಿಸಿ ಕೋವಿಡ್-19 ವೈರಾಣು ನಿಯಂತ್ರಣ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಸ್ಯಾಂಪಲ್ ಪಡೆಯಲು ಬಂದಾಗ ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಂಡು ಬರಬೇಕಾದ ಜನರು ಒಮ್ಮಲೆ ಜಮಾಯಿಸಿರುವುದು ಕಂಡು ಬಂದಿದೆ.
ಸ್ಥಳದಲ್ಲಿ ಪೊಲೀಸರು ಇಲ್ಲದೇ ಇರುವುದು ಇಂಥ ಘಟನೆ ನಡೆಯಲು ಕಾರಣವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.