ಬಸವಕಲ್ಯಾಣ: ಕೊರೊನಾ ಭೀತಿಯಿಂದ ವಲಸೆ ಹೋಗಿ ಅನ್ಯ ರಾಜ್ಯಗಳಿಂದ ಮರಳಿ ಗ್ರಾಮಕ್ಕೆ ಬಂದವರು ಮನೆಯಲ್ಲಿ ಇರದೇ ಊರೆಲ್ಲ ಸುತ್ತಾಡಿದ ಪರಿಣಾಮ ಗ್ರಾಮಸ್ಥರಲ್ಲಿ ಈಗ ಆತಂಕ ಮನೆ ಮಾಡಿದೆ.
ಮುಂಬೈನಿಂದ ಕೋಹಿನೂರು ಗ್ರಾಮಕ್ಕೆ ಆಗಮಿಸಿದ ದಂಪತಿ ಹಾಗೂ ಬಟಗೇರಾ ಗ್ರಾಮದ ದಂಪತಿಗಳ ಪೈಕಿ ಪತಿಗಳಿಗೆ ಆಯಾ ಗ್ರಾಮಗಳ ಸರ್ಕಾರಿ ಶಾಲೆಯಲ್ಲಿ ಆರಂಭಿಸಲಾದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಇವರಿಬ್ಬರ ಪತ್ನಿಯರು ಗರ್ಭಿಣಿಯರಾಗಿರುವ ಕಾರಣ ಇವರನ್ನು ಅವರವರ ಮನೆಗಳಲ್ಲಿಯೇ ಗೃಹ ನಿರ್ಬಂಧಕ್ಕೆ ಒಳಪಡಿಸಲಾಗಿತ್ತು.
ಕೋಹಿನೂರು ಗ್ರಾಮದ ಪತಿ ಹಾಗೂ ಪತ್ನಿಗಳಿಬ್ಬರಿಗೂ ಕೊರೊನಾ ಪಾಸಿಟಿವ್ ಬಂದರೆ ಬಟಗೇರಾ ಗ್ರಾಮದ ದಂಪತಿಗಳ ಪೈಕಿ ಪತ್ನಿಗೆ ಮಾತ್ರ ಪಾಸಿಟಿವ್ ಬಂದಿದೆ. ಕೋಹಿನೂರು ಗ್ರಾಮದ ಗರ್ಭಿಣಿ ಮನೆ ಬಿಟ್ಟು ಹೊರ ಬಂದಿಲ್ಲವಾದರೂ ಮನೆಯವರೊಂದಿಗೆ ಬೆರೆತು ಉಳಿದುಕೊಂಡಿದ್ದು, ಮನೆಯವರು ಊರೆಲ್ಲ ಸುತ್ತಾಡಿದ್ದಾರೆ. ಇವರ ಅತ್ತೆ ಗ್ರಾಮದಲ್ಲಿ ತರಕಾರಿ ಮಾರಾಟ ಮಾಡಿದ್ದಾರೆ. ಹೀಗಾಗಿ ಇವರ ಬಳಿ ತರಕಾರಿ ಖರೀದಿಸಿ ಊಟ ಮಾಡಿದವರಿಗೆಲ್ಲ ಈಗ ಕೊರೊನಾ ಭೀತಿ ಎದುರಾಗಿದೆ.
ಗೆಳೆಯರನ್ನು ತಬ್ಬಿ ಕೊರೊನಾ ತಗುಲಿಸಿಕೊಂಡ:
ತಾಲೂಕಿನ ಸಿರಗೂರು ಗ್ರಾಮದಲ್ಲಿ ಮೂವರು ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದರಲ್ಲಿ ಇಬ್ಬರು ಮಹಾರಾಷ್ಟ್ರಕ್ಕೆ ಹೊಗಿ ಬಂದವರಾದರೆ. ಮತ್ತೊಬ್ಬ ಯುವಕ ಎಲ್ಲಿಗೂ ಹೋಗಿ ಬಂದವನಲ್ಲ. ಆದರೆ, ಮಹಾರಾಷ್ಟ್ರಕ್ಕೆ ಹೊಗಿಮರಳಿ ಗ್ರಾಮಕ್ಕೆ ಬಂದ ಗೆಳೆಯರನ್ನು ಭೇಟಿ ಮಾಡಿದ ಈ ಯುವಕ, ಗೆಳೆಯರನ್ನು ಕಂಡ ಕೂಡಲೆ ಇಬ್ಬರನ್ನು ತಬ್ಬಿಕೊಂಡಿದ್ದೆಇವನಿಗೆ ಮುಳುವಾಗಿದೆ.
ಗೆಳೆಯರನ್ನು ತಬ್ಬಿಕೊಂಡ ತಪ್ಪಿಗೆ ಈತನು ಕೂಡ ಕ್ವಾರಂಟೈನ್‌ಲ್ಲಿದ್ದ, ಬುಧವಾರ ಬಂದ ವರದಿಗಳಲ್ಲಿ ಈತನಿಗೂ ಕೊರೊನಾ ಸೋಂಕು ತಗುಲಿದ್ದು ಖಚಿತಗೊಂಡಿದೆ. ಆತುರದಲ್ಲಿ ಮಾಡಿದ ತಪ್ಪಿಗೆ ಈಗ ಅಮಾಯಕ ಕೂಡ ಶಿಕ್ಷೆ ಅನುಭವಿಸುವಂತಾಗಿದೆ.