ಬೀದರ್: ಕೊರೊನಾ ವೈರಸ್‌ನಿಂದ ಸಾರ್ವಜನಿಕರು ಜಾಗೃತಿ ವಹಿಸಬೇಕು. ಜನಸಂದಣಿ ಇರುವ ಸ್ಥಳಗಳಿಂದ ಜನರು ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ತಡೆಗೆ ಸಹಕರಿಸಬೇಕು ಎಂದು ಸಹಾಯಕ ಆಯುಕ್ತ ಭಂವರಸಿಗ್ ಮೀನಾ ಹೇಳಿದರು.
ನಗರದ ಮಿನಿವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಅದನ್ನು ಮುಂಜಾಗ್ರತೆ ವಹಿಸಿ ತಡೆಗಟ್ಟಬೇಕು. ಹೊರ ದೇಶಗಳಿಂದ ಆಗಮಿಸಿದ ಇಬ್ಬರು ವ್ಯಕ್ತಿಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಲಾಗುತ್ತಿದೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಹೊರದೇಶಗಳಿಂದ ಆಗಮಿಸಿರುವ ವ್ಯಕ್ತಿಗಳ ಮೇಲೆ ವಿಶೇಷ ನಿಗಾ ಇಡಲಾಗಿದೆ. ಅವರು ತಮ್ಮ ಗ್ರಾಮಕ್ಕೆ ಆಗಮಿಸಿದ ನಂತರ 14 ದಿನಗಳ ಒಳಗೆ ಅವರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪರೀಕ್ಷೆ ಮಾಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದೆ.
ಸರ್ಕಾರ ಶಾಲೆಗಳಿಗೆ ರಜೆ ಘೋಷಿಸಿದ್ದರೂ ತಾಲೂಕಿನಲ್ಲಿ ಕೆಲ ಖಾಸಗಿ ಶಾಲೆಗಳು ಕೆಲಸ ಮಾಡುತ್ತಿವೆ ಎಂದು ಪತ್ರಕರ್ತರು ಹೇಳಿದಾಗ ಉತ್ತರಿಸಿದ ಅವರು, ಈಗಾಗಲೇ ಸರಕಾರ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ಶಾಲೆಗಳಿಗೆ ರಜೆ ನೀಡುವಂತೆ ತಿಳಿಸಿದ್ದಾರೆ. ಇಷ್ಟರ ಮೇಲೂ ಶಾಲೆಗಳು ನಡೆದರೆ ಅಂತಹ ಶಾಲೆಗಳ ಮೇಲೆ ಕ್ರಮ ಜರುಗಿಸಲಾಗುವದು ಎಂದರು.
ತಹಶೀಲ್ದಾರ್ ಸಾವಿತ್ರ ಸಲಗರ್ ಮಾತನಾಡಿ, ತಾಲೂಕಿನಲ್ಲಿ ಸಭೆ-ಸಮಾರಂಭಗಳಿಗೆ ಈಗಾಗಲೇ ಕಡಿವಾಣ ಹಾಕಲಾಗುತ್ತಿದೆ. ಕಾನೂನು ಪಾಲಿಸದವರ ಮೇಲೆ ಕ್ರಮ ಜರುಗಿಸಲಾಗುವದು. ತಾಲೂಕಿನ ಗಡಿಗೌಂಡಗಾವನಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕ್ರಮ ನಡೆಸದಂತೆ ಅಲ್ಲಿನ ಮಠಾಧೀಶರಿಗೆ ಮನವರಿಕೆ ಮಾಡಲಾಗಿದೆ. ಸರ್ಕಾರದ ಆದೇಶ ಮೀರಿ ಸಭೆ, ಸಮಾರಂಭ ಹಾಗೂ ಜಾತ್ರೆಗಳನ್ನು ನಡೆಸಿದರೆ ಕ್ರಮ ಕೈಗೊಳ್ಳಲಾಗುವದು ಎಂದರು.