ಬಸವಕಲ್ಯಾಣ: ಮಾರಕ ಕೊರೊನಾ ಕಾಯಿಲೆ ತಡೆಗಟ್ಟುವ ಹಿನ್ನೆಲೆ ಸ್ಥಳೀಯ ಆಡಳಿತದಿಂದ ಸಾಕಷ್ಟು ಬಿಗಿ ಕ್ರಮ ಕೈಗೊಳ್ಳಲಾಗಿದೆ. ಆದ್ರೆ ಮಹಾರಾಷ್ಟ್ರದಿಂದ ಬರುವ ಬಸ್ಗಳನ್ನು ಯಾವುದೇ ತಪಾಸಣೆ ನಡೆಸದೇ ಇರುವುದನ್ನು ಗಮನಿಸಿದ್ರೆ ಜಿಲ್ಲೆಗೆ ಕೊರೊನಾ ಪ್ರವೇಶಕ್ಕೆ ದಾರಿ ಸುಗಮವಾಗಿಸಿದಂತಾಗಿದೆ.
ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮೀಣ ಭಾಗದ ಮಾರ್ಗವಾಗಿ ಸಂಚರಿಸುವ ಮಹಾರಾಷ್ಟ್ರ ಸಾರಿಗೆ ವಾಹನಗಳಿಗೆ ಯಾವುದೇ ರೀತಿಯ ತಪಾಸಣೆ ಮಾಡದಿರುವುದು ಕೊರೊನಾ ಪ್ರವೇಶಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಂತೆ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಜಿಲ್ಲೆಗೆ ಕೊರೊನಾ ಬರುವುದನ್ನು ತಡೆಯಬೇಕು ಎನ್ನುವ ನಿಟ್ಟಿನಲ್ಲಿ ವಿದೇಶದಿಂದ ಬರುವ ಪ್ರತಿಯೊಬ್ಬರ ಮೇಲೆ ನಿಗಾ ವಹಿಸಲಾಗುತ್ತಿದೆ.
ಆದರೆ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿರುವ ಮಹಾರಾಷ್ಟ್ರ ರಾಜ್ಯದಿಂದ ಬರುವ ಪ್ರತಿಯೊಬ್ಬರಿಗೂ ತಪಾಸಣೆ ಮಾಡಬೇಕಿದೆ. ಅಂದಾಗ ಮಾತ್ರ ಜಿಲ್ಲೆಗೆ ಕೊರೊನಾ ಪ್ರವೇಶಿಸದಂತೆ ತಡೆಯಲು ಸಾಧ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.