ಬೀದರ್: ಬೀದರ್-ಹುಮನಾಬಾದ್ ಮಾರ್ಗವಾಗಿ ಹೊಸ 3 ವಿಶೇಷ ರೈಲುಗಳು ಚಲಿಸಲಿವೆ ಎಂದು ನವೀಕರಿಸಬಹುದಾದ ಇಂಧನ ಮೂಲ ಮತ್ತು ರಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ತಿಳಿಸಿದ್ದಾರೆ.
ಜನತೆಯ ಬಹು ದಿನದ ಬೇಡಿಕೆಗೆ ಅನುಗುಣವಾಗಿ, ವಾಯಾ ಬೀದರ್- ಹುಮನಾಬಾದ್ ಮಾರ್ಗವಾಗಿ, ನಾಂದೇಡ-ಯಶವಂತಪೂರ-ನಾಂದೇಡ (ರೈಲು ಸಂಖ್ಯೆ: 07093 / 07094), ಸೋಲ್ಹಾಪೂರ-ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲ್ಹಾಪೂರ (ರೈಲು ಸಂಖ್ಯೆ: 01435/01436) ಮತ್ತು ಸೋಲ್ಹಾಪೂರ - ತಿರುಪತಿ - ಸೋಲ್ಹಾಪೂರ (ರೈಲು ಸಂಖ್ಯೆ: 01437/01438) ಒಟ್ಟು ಹೊಸ 3 ವಿಶೇಷ ರೈಲುಗಳು ಚಲಿಸಲಿದ್ದು ಈ ರೈಲುಗಳ ಸದೂಪಯೋಗ ಪಡೆದುಕೊಳ್ಳಬೇಕೆಂದು ಸಚಿವರು ಜನತೆಯಲ್ಲಿ ಮನವಿ ಮಾಡಿದರು.
ನಾಂದೇಡ-ಯಶವಂತಪೂರ-ನಾಂದೇಡ (ರೈಲು ಸಂಖ್ಯೆ: 07093) ಈ ರೈಲು ಡಿಸೆಂಬರ್ ತಿಂಗಳಲ್ಲಿ ದಿನಾಂಕ: 5, 12, 19 ಮತ್ತು 26 ಒಟ್ಟು 4 ಸೋಮುವಾರಗಳಂದು ನಾಂದೇಡ್ ನಿಂದ ಮಧ್ಯಾಹ್ನ 1.35 ಗಂಟೆಗೆ ಹೊರಟು ಪೂರ್ಣ, ಪರಭಾಣಿ, ಲಾತೂರ ರೋಡ್ ಮೂಲಕ ಭಾಲ್ಕಿಗೆ ರಾತ್ರಿ. 7.25ಕ್ಕೆ, ಬೀದರಗೆ ರಾ. 7.50ಕ್ಕೆ, ಹುಮನಾಬಾದಗೆ ರಾ. 8.55ಕ್ಕೆ ತಲುಪಲಿದೆ ಅಲ್ಲಿಂದ ಕಲಬುರಗಿ, ರಾಯಚೂರ, ಹಿಂದುಪೂರ, ಯಲಹಂಕ ಮಾರ್ಗವಾಗಿ ಯಶವಂತಪೂರ ಮರುದಿನ ಮಂಗಳವಾರ ಬೆ. 11.00 ಗಂಟೆಗೆ ತಲುಪಲಿದೆ.
ಯಶವಂತಪೂರ-ನಾಂದೇಡ-ಯಶವಂತಪೂರ (ರೈಲು ಸಂಖ್ಯೆ: 07094) ದಿನಾಂಕ: 6, 13, 20, 27 ಒಟ್ಟು 4 ಮಂಗಳವಾರಗಳಂದು, ಸಾಯಂಕಾಲ 4.15 ಗಂಟೆಗೆ ಯಶವಂತಪೂರನಿಂದ ಹೊರಟು ಬಂದ ಮಾರ್ಗವಾಗಿ ಮರುದಿನ ಬುಧವಾರ ನಸುಕಿನ ಜಾವ ಬೆ. 3.25ಕ್ಕೆ ಹುಮನಾಬಾದ, ಬೆ. 5.00 ಗಂಟೆಗೆ ಬೀದರ ಮತ್ತು ಬೆ. 5.45ಕ್ಕೆ ಭಾಲ್ಕಿಗೆ ತಲುಪಲಿದೆ ನಂತರ ಮಧ್ಯಾಹ್ನ 1.00 ಗಂಟೆಗೆ ನಾಂದೇಡ ತಲುಪಲಿದೆ.
ಇದರ ಜೊತೆಗೆ ಸೋಲ್ಹಾಪೂರ-ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲ್ಹಾಪೂರ (ರೈಲು ಸಂಖ್ಯೆ: 01435/01436) ಮತ್ತು ಸೋಲ್ಹಾಪೂರ-ತಿರುಪತಿ-ಸೋಲ್ಹಾಪೂರ (ರೈಲು ಸಂಖ್ಯೆ: 01437/01438) ವಿಶೇಷ ರೈಲುಗಳು ಸಹ ಡಿಸೆಂಬರ್ 13 ರಿಂದ ಫೆಬ್ರುವರಿ 17 ರವರೆಗೆ ವಾರಕ್ಕೊಮ್ಮೆ ವಾಯಾ ಬೀದರ್, ಹುಮನಾಬಾದ್, ಕಲಬುರಗಿ ಮಾರ್ಗವಾಗಿ ಚಲಿಸಲಿದ್ದು, ಇವುಗಳ ಸಂಪೂರ್ಣ ಮಾಹಿತಿ ಶಿಘ್ರದಲ್ಲಿ ತಿಳಿಸಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಭಗವಂತ ಖೂಬಾರವರು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವರನ್ನು ಭೇಟಿ ಮಾಡಿ ಬೀದರ್ ಹುಮನಾಬಾದ ಕಲಬುರಗಿ ಮಾರ್ಗದಿಂದ ಆದಷ್ಟು ಹೆಚ್ಚು ರೈಲುಗಳು ಚಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಜನರು ಈ ರೈಲುಗಳಲ್ಲಿ ಪ್ರಯಾಣಿಸಬೇಕು ಹಾಗೂ ಈ ರೈಲುಗಳ ಮಾಹಿತಿ ಜನತೆ ತಮ್ಮ ಸುತ್ತಮುತ್ತಲಿನ ಜನರಿಗೂ ಸಹ ತಿಳಿಸುವಂತರಾಗಬೇಕು ಎಲ್ಲರೂ ವಿಶೇಷ ರೈಲುಗಳ ಸದೂಪಯೋಗಪಡೆದುಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ:ಬೀದರ್ ಇತಿಹಾಸ ನಮ್ಮ ಯುವ ಪೀಳಿಗೆಗೆ ತಿಳಿಯುವಂತಾಗಬೇಕು: ಭಗವಂತ ಖೂಬಾ