ಬೀದರ್ : ಕಾಂಗ್ರೆಸ್ ಮನೆ ಖಾಲಿ ಆಗ್ತಿದೆ. ಬಿಜೆಪಿ ಹಡಗು ತುಂಬುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ, ದಲಿತ ಸಮುದಾಯದ ಕಾಂಗ್ರೆಸ್ ನಾಯಕರ ರಾಜಕೀಯ ಮುಗಿಸುವ ಕೆಲಸ ಮಾಡ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದರು.
ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೇಸೋಲಿಸಿತು. ಈಗ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಲಬುರಗಿ ಲೋಕಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಜಿ.ಪರಮೇಶ್ವರ ಅವರನ್ನು ಸೋಲಿಸುವ ಮೂಲಕ ದಲಿತ ನಾಯಕತ್ವ ಮುಗಿಸುತ್ತಿದ್ದಾರೆ ಎಂದು ಗಂಭಿರ ಆರೋಪ ಮಾಡಿದರು.
ಅಲ್ಲದೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಅವರ ಮನೆಗೆ ಬೆಂಕಿ ಹಚ್ಚಿದ್ದು ಕಾಂಗ್ರೆಸ್. ಹಲವು ಶಾಪಗಳಿಂದ ಪಕ್ಷ ವಿನಾಶ ಹಂತಕ್ಕೆ ತಲುಪಿದೆ ಎಂದು ಕಟೀಲ್ ಹೇಳಿದರು. ಇದೇ ವೇಳೆಯಲ್ಲಿ ಸುನೀಲ್ ರಾಯವಾಡೆ ಹಾಗೂ ರವಿ ಗಾಯಕವಾಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು. ಸಚಿವ ಪ್ರಭು ಚೌಹಾಣ್, ಸಂಸದ ಭಗವಂತ ಖೂಬಾ, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ ಸೇರಿದಂತೆ ಬಿಜೆಪಿ ನಾಯಕರು ವೇದಿಕೆಯಲ್ಲಿದ್ದರು.