ಬೀದರ್: ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಸೌದಿ ಅರೇಬಿಯಾಕ್ಕೆ ಹೋದ ಜಿಲ್ಲೆಯ 20ಕ್ಕೂ ಹೆಚ್ಚು ಯುವಕರು, ಕೊರೊನಾ ಹಿನ್ನೆಲೆ ಅಲ್ಲಿಂದ ತಾಯ್ನಾಡಿಗೆ ಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯ ಹುಮನಾಬಾದ್ ತಾಲೂಕಿನ ಸಿಂದನಕೇರಾ, ರೇಕುಳಗಿ, ಬಸವಕಲ್ಯಾಣ, ಚಿಟಗುಪ್ಪ ಹಾಗೂ ಭಾಲ್ಕಿ ತಾಲೂಕಿನ ವಿವಿಧ ಗ್ರಾಮಗಳ 20ಕ್ಕೂ ಹೆಚ್ಚು ಯುವಕರು ಉದ್ಯೋಗ ಅರಸಿ ಒಂದು ವರ್ಷದ ಹಿಂದೆ ಎ-1 ಸೋಫಿ ಗ್ರೂಪ್ ಎಂಬ ಕಂಪನಿ ಮೂಲಕ ಸೌದಿ ಅರೇಬಿಯಾಕ್ಕೆ ಹೋಗಿದ್ದರು. ಆದರೆ, ಕೊರೊನಾ ಲಾಕ್ಡೌನ್ನಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಕಂಪನಿ ಕೆಲಸ ಸ್ಥಗಿತಗೊಂಡಿದ್ದು, ಕೆಲಸವಿಲ್ಲದೆ ಕಂಗಾಲಾಗಿದ್ದಾರೆ.
ಸೌದಿ ಅರೇಬಿಯಾದ ರಾಜಧಾನಿ ರಿಯಾತ್ ಎಂಬ ನಗರದಲ್ಲಿ ಇಕ್ಕಟ್ಟಾದ ಒಂದು ಕೊಠಡಿಯಲ್ಲಿ ಈ ಎಲ್ಲಾ ತಮ್ಮನ್ನ ಕ್ವಾರಂಟೈನ್ ಮಾಡಲಾಗಿದೆ. ಕಂಪನಿಯಿಂದ ದಿನಕ್ಕೊಂದು ಬಾರಿ ಮಾತ್ರ ಊಟ ನೀಡಲಾಗುತ್ತಿದೆ ಎಂದು ಯುವಕರು ಹೇಳುತ್ತಿದ್ದಾರೆ.
ಈ ಕುರಿತು ವಿಡಿಯೋ ಮಾಡಿರುವ ಯುವಕರು, ನಮಗೆ ಸರಿಯಾದ ಊಟ ಸಿಗುತ್ತಿಲ್ಲ. ಸಿಕ್ಕ ಸ್ವಲ್ಪ ಊಟವೂ ಸೇರ್ತಿಲ್ಲ, ನಾಲ್ಕು ತಿಂಗಳಿಂದ ಹೀಗೆ ಬದುಕುತ್ತಿದ್ದೇವೆ. ನಾವು ಭಾರತಕ್ಕೆ ವಾಪಸ್ ಹೋಗಬೇಕು ಅಂದರೂ ಅದು ಸಾಧ್ಯವಾಗುತ್ತಿಲ್ಲ, ಕಂಪನಿ ವ್ಯವಸ್ಥಾಪಕರು ನಮ್ಮ ಗೋಳು ಕೇಳುತ್ತಿಲ್ಲ. ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ನಮ್ಮ ಗೋಳು ಆಲಿಸುತ್ತಿಲ್ಲ ಎಂದು ಅಳಲು ತೊಡಿಕೊಂಡಿದ್ದಾರೆ.
ವಿದೇಶದಲ್ಲಿ ಉದ್ಯೋಗ ಇಲ್ಲದೆ, ಕೈಯಲ್ಲಿ ಸಂಬಳ ಇಲ್ಲದೆ ಬದುಕುವುದು ಕಷ್ಟವಾಗಿದೆ. ಬೀದರ್ ಜಿಲ್ಲೆಯ 20ಕ್ಕೂ ಅಧಿಕ ಯುವಕರು ಒಂದೇ ಭಾಗದಲ್ಲಿದ್ದೇವೆ. ನಮ್ಮನ್ನು ಇಲ್ಲಿಗೆ ಕೆಲಸಕ್ಕೆ ಕಳುಹಿಸಿದ ಮಧ್ಯವರ್ತಿಗಳೂ ಕೂಡ ನಮ್ಮ ಗೋಳು ಕೇಳದೆ, ಕೊರೊನಾ ಇದೆ ಏನು ಮಾಡೋದಕ್ಕೂ ಆಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ನಮ್ಮನ್ನ ವಾಪಸ್ ದೇಶಕ್ಕೆ ಕರೆಯಿಸಿಕೊಳ್ಳಿ ಎಂದು ಯುವಕರು ಮನವಿ ಮಾಡಿದ್ದಾರೆ.
ಸೌದಿ ಅರೇಬಿಯಾದಲ್ಲಿ ಬೀದರ್ ಯುವಕರು ಅನುಭವಿಸುತ್ತಿರುವ ನರಕಯಾತನೆ ಕುರಿತು ಸಂಸದ ಭಗವಂತ ಖೂಬಾ ಅವರಿಗೆ ತಿಳಿಸಲಾಗಿದೆ. ಭಾರತ ಸರ್ಕಾರ, ತಾವು ಸ್ವದೇಶಕ್ಕೆ ಮರಳುವ ವಿಚಾರ ಕುರಿತು ಗಂಭೀರವಾಗಿ ಪರಿಗಣಿಸಬೇಕು ಎಂದು ವಿದೇಶದಲ್ಲಿ ಸಿಲುಕಿರುವ ಯುವಕರು ಮನವಿ ಮಾಡಿಕೊಂಡಿದ್ದಾರೆ.