ಬೀದರ್ : ಕೋವಿಡ್-19 ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಯೋಗ ಕ್ಷೇಮ ವಿಚಾರಣೆ ಮಾಡುವ ಮೂಲಕ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಸಲಹೆ ನೀಡಿದರು.
ಜಿಲ್ಲೆಯ ಔರಾದ್ ತಾಲೂಕಿನ ಹಣೇಶಪೂರ್ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರನ್ನ ಭೇಟಿ ಮಾಡಿ ಅವರು ಮಾಡ್ತಿರುವ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಅಲ್ಲದೇ ಹೋಂ ಕ್ವಾರಂಟೈನ್ನಲ್ಲಿರುವವರನ್ನು ಯಾವ ರೀತಿಯಾಗಿ ನಿರ್ವಹಣೆ ಮಾಡ್ತಾಯಿದ್ದಿರಾ, ನಿಮಗೇನಾದರೂ ಸಮಸ್ಯೆ ಆಗ್ತಿದ್ದರೆ ಹೇಳಿ ಎಂದು ಕೇಳಿದರು.
ಮಾಸ್ಕ್ ಹಾಗೂ ಸ್ಯಾನಿಟೈಸರ್ ಸಕಾಲಕ್ಕೆ ಸಿಗ್ತಾ ಇವೆಯಾ. ಯಾವುದೇ ಶಂಕಿತ ರೋಗಿಯ ಬಳಿ ಹೋಗುವುದಕ್ಕೂ ಮೊದಲು ನೀವು ಎಲ್ಲಾ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಳ್ಳಬೇಕು ಕೊರೊನಾ ಸೋಂಕು ಭಯಾನಕವಿದೆ. ನಿಮ್ಮ ಆರೋಗ್ಯದ ಜತೆಯಲ್ಲೇ ಜನರ ಆರೋಗ್ಯ ಕಾಪಾಡಿ ಎಂದು ಹೇಳಿದರು.
ಇದಕ್ಕೂ ಮೊದಲು ಔರಾದ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಪ್ರಭು ಚವ್ಹಾಣ ಅವರು ಆಸ್ಪತ್ರೆಯಲ್ಲಿ ಕರ್ತವ್ಯನಿರತ ಸಿಬ್ಬಂದಿ ಮಾಸ್ಕ್ ಧರಿಸದೇ ಇರುವುದನ್ನು ಕಂಡು ಕೆಂಡಾಮಂಡಲರಾದರು. ಆಸ್ಪತ್ರೆ ಒಳಗೆ ಬರುವ ಪ್ರತಿಯೊಬ್ಬರು ಮಾಸ್ಕ್ ಧರಿಸಲೇಬೇಕು ಎಂದು ಸ್ಥಳದಲ್ಲೆ ಇದ್ದ ತಾಲೂಕು ವೈಧ್ಯಾಧಿಕಾರಿ ಡಾ.ಶರಣಯ್ಯ ಅವರಿಗೆ ಖಡಕ್ ವಾರ್ನಿಂಗ್ ನೀಡಿದರು.