ಬೀದರ್: ಪಶು ಸಂಗೋಪನಾ, ಬೀದರ್ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು 10 ದಿನಗಳ ಕಾಲ ಹೋಂ ಕ್ವಾರಂಟೈನ್ ಆಗಿದ್ದು, ಸ್ವಗ್ರಾಮ ಬೊಂತಿ ಘಮಸುಬಾಯಿ ತಾಂಡದ ಮನೆಯಲ್ಲೆ ಎಕಾಂಗಿಯಾಗಿರಲಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ್ ಕಟ್ಟೆ ತಿಳಿಸಿದ್ದಾರೆ.
ಕೊರೊನಾ ವೈರಸ್ ಅಟ್ಟಹಾಸ ಹೆಚ್ಚಾಗಿದ್ದು ಈ ವೇಳೆ ಸಚಿವ ಪ್ರಭು ಚವ್ಹಾಣ ಅವರು ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಜಿಲ್ಲೆಯಾದ್ಯಂತ ಪ್ರಯಾಣ ಮಾಡಿ, ಸಭೆ, ಸಮಾರಂಭ ಹಾಗೂ ಸಾರ್ವಜನಿಕರ ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವೈಧ್ಯರ ಸಲಹೆ ಮೇರೆಗೆ ಹೊಂ ಕ್ವಾರಂಟೈನ್ ಆಗಿದ್ದಾರೆ. ಈ ವೇಳೆಯಲ್ಲಿ ಸಾರ್ವಜನಿಕರ ಭೇಟಿ ನಿರ್ಬಂಧಿಸಲಾಗಿದ್ದು ಸಚಿವರ ತುರ್ತು ಸೇವೆಗಳಿಗಾಗಿ ಆಪ್ತ ಸಹಾಯಕರನ್ನು ಸಂಪರ್ಕಿಸಬಹುದು ಎಂದು ಕರ್ತವ್ಯಾಧಿಕಾರಿ ಶಿವಕುಮಾರ್ ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಾಕ್ಡೌನ್ ಅನುಷ್ಠಾನಕ್ಕೆ ಸಚಿವರ ಸೂಚನೆ:
ಕೊರೊನಾ ಸೋಂಕು ಹರಡುವಿಕೆಗೆ ಬ್ರೇಕ್ ಹಾಕಲು ಒಂದು ವಾರಗಳ ಕಾಲ ಬೀದರ್ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಜಾರಿಗೆ ತರಲಾದ ಲಾಕ್ಡೌನ್ ಪರಿಣಾಮಕಾರಿ ಅನುಷ್ಢಾನಗೊಳಿಸುವಂತೆ ಎರಡು ಜಿಲ್ಲೆಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್, ಯಾದಗಿರಿ ಜಿಲ್ಲಾಧಿಕಾರಿ ಕುರ್ಮಾರಾವ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಅವರಿಗೆ ಲಾಕ್ಡೌನ್ ಪರಿಣಾಮಕಾರಿ ಜಾರಿಗೆ ಸೂಚನೆ ನೀಡಿದ್ದಾರೆ ಎಂದು ಕಟ್ಟೆ ತಿಳಿಸಿದ್ದಾರೆ.