ಬೀದರ್ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇತ್ತೀಚೆಗೆ ಭಾರಿ ಪ್ರವಾಹ ಬಂದು ಅಪಾರ ಹಾನಿಯಾಗಿದೆ. ಆಸ್ತಿ-ಪಾಸ್ತಿ ಕಳೆದುಕೊಂಡು ಅನೇಕ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸ್ಥಿತಿಯಲ್ಲಿ ಸನ್ಮಾನ ಮಾಡಿಸಿಕೊಳ್ಳದಿರಲು ನಾನು ಬಯಸಿದ್ದೇನೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಮನವಿ ಮಾಡಿದ್ದಾರೆ.
ಸಚಿವನಾದ ಮೇಲೆ ಮೊದಲ ಬಾರಿಗೆ ಆಗಸ್ಟ್ 29ರಂದು ನಾನು, ಬೀದರ್ಗೆ ಆಗಮಿಸುತ್ತಿದ್ದು, ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಲು ನಿರ್ಧರಿಸಿದ್ದಾರೆ ಎಂಬುದು ನನಗೆ ಗೊತ್ತು. ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಾದ ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿಗೆ ನಾನು ಹಾಗೂ ಸಚಿವ ಶ್ರೀರಾಮುಲು ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದ್ದೇವೆ. ಪ್ರವಾಹವು ಅನೇಕರ ಬದುಕು ನುಚ್ಚು-ನೂರು ಮಾಡಿರುವುದು ಕಣ್ಣಾರೆ ಕಂಡು ಬೇಜಾರಾಗಿದೆ. ಸರ್ಕಾರ ಸಂತ್ರಸ್ತರ ನೆರವಿಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ. ನಮ್ಮ ಜನ ಸಂಕಷ್ಟದಲ್ಲಿರುವಾಗ ನಾವು ಸನ್ಮಾನ, ಮೆರವಣಿಗೆ ಮಾಡಿ ಸಂಭ್ರಮಾಚರಣೆ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಬೈಕ್ ರ್ಯಾಲಿ, ಮೆರವಣಿಗೆ ನಡೆಸಬೇಡಿ :
ಆಗಸ್ಟ್ 29ರಂದು ನಾನು ಬೀದರ್ಗೆ ಆಗಮಿಸುವ ವೇಳೆ ಯಾರೂ ನನಗೆ ಸನ್ಮಾನ ಸಭೆ ಆಯೋಜಿಸಬಾರದು. ಹಾಗೂ ಬೈಕ್ ರ್ಯಾಲಿ, ಮೆರವಣಿಗೆ, ಪಟಾಕಿ ಸಿಡಿಸುವುದು ಮಾಡಬಾರದು. ನಿಮ್ಮೆಲ್ಲರ ಆಶೀರ್ವಾದ, ನೀವು ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸವೇ ಬಹುದೊಡ್ಡ ಸನ್ಮಾನ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.