ಬೀದರ್: ನಗರದ ಓಲ್ಡ್ ಸಿಟಿಯ ಕೊರೊನಾ ಸೋಂಕಿತ ಭಾಗದಲ್ಲಿ ವಾಸವಿರುವ ಎಲ್ಲಾ ಸಾರ್ವಜನಿಕರ ಸಾಮೂಹಿಕ ಆರೋಗ್ಯ ತಪಾಸಣೆ ಕಡ್ಡಾಯವಾಗಿದ್ದು, ಮೇ 14ರವರೆಗೆ ತಪಾಸಣೆ ಕಾರ್ಯ ನಡೆಯಲಿದೆ ಎಂದು ಸಹಾಯಕ ಆಯುಕ್ತ ಅಕ್ಷಯ ಶ್ರೀಧರ್ ಹೇಳಿದ್ದಾರೆ.
ನಗರದ ಓಲ್ಡ್ ಸಿಟಿಯ ಮನಿಯಾರ್ ತಾಲಿಮ್, ಗೋಲೆಖಾನಾ, ಅಹಮ್ಮದ ಬಾಗ, ಪಾತಾಳನಗರ ಹಾಗೂ ದುಲ್ಹಣನ ದರ್ವಾಜಾ ಭಾಗದ ಅಂದಾಜು 6ರಿಂದ 7 ಸಾವಿರ ಜನರ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಿದ್ದಾರೆ. ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಈ ಭಾಗವನ್ನು ಸೀಲ್ ಡೌನ್ ಮಾಡಲಾಗಿದ್ದು, ಹೆಚ್ಚು ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಮೇ 14ರವರೆಗೆ ವೈದ್ಯಕೀಯ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
ಈ ವೇಳೆಯಲ್ಲಿ ವೈದ್ಯಕೀಯ ತಪಾಸಣೆಯಿಂದ ತಪ್ಪಿಸಿಕೊಂಡು ಲಾಕ್ಡೌನ್ ನಿಯಮ ಉಲ್ಲಂಘಿಸಿದ್ರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಓಲ್ಡ್ ಸಿಟಿಯ ಇನ್ಸಿಡೆಂಟ್ ಕಮ್ಯಾಂಡರ್ ಹಾಗೂ ಸಹಾಯಕ ಆಯುಕ್ತ ಅಕ್ಷಯ ಶ್ರೀಧರ ಈ ಎಚ್ಚರಿಕೆ ನೀಡಿದ್ದಾರೆ.