ಬೀದರ್: ಸರ್ಕಾರಿ ಶಾಲೆಯ ಸ್ಕೌಟ್ಸ್ ಗೈಡ್ ವಿಭಾಗದ ಮಕ್ಕಳ ತಂಡವೊಂದು ವಿವಿಧ ಮೂಲಗಳಿಂದ ಬಟ್ಟೆ ಜಮಾಯಿಸಿ ತಂದು ಮನೆಯಲ್ಲೇ ಮಾಸ್ಕ್ ತಯಾರಿಸಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಮನೆಯಲ್ಲೆ ಮಾಸ್ಕ್ಗಳನ್ನು ತಯಾರಿಸುತ್ತಿದ್ದಾರೆ. ಶಿಕ್ಷಕರು, ಹಳೇ ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಯೋಗದಿಂದ ಕೈಯಿಂದ ಮಾಸ್ಕ್ ತಯಾರಿಸುತ್ತಿದ್ದಾರೆ. ಇದೇ ತಿಂಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಕೊರೊನಾ ವಿರುದ್ಧದ ಹೊರಾಟದಲ್ಲಿ ತನ್ನದೇ ಆದ ಸಹಯೋಗ ನೀಡಲು ಮುಂದಾಗಿದ್ದಾರೆ.
ಮೊದಲ ಹಂತದಲ್ಲಿ 400ಕ್ಕೂ ಅಧಿಕ ಮಾಸ್ಕ್ಗಳು ತಯಾರಿಸಿರುವ ವಿದ್ಯಾರ್ಥಿಗಳು, ಯನಗುಂದಾ ಗ್ರಾಮದಲ್ಲಿ ಸುತ್ತಾಡಿ ಮತ್ತಷ್ಟು ಬಟ್ಟೆ, ಸಲಕರಣೆ ಸಂಗ್ರಹಿಸಿ ಅಂದಾಜು 2000 ಮಾಸ್ಕ್ ತಯಾರಿಸುವ ಗುರಿ ಹೊಂದಿದ್ದಾರೆ. ಶಾಲಾ ಸಮಿತಿ ಅಧ್ಯಕ್ಷ ಶಿವರಾಜ್ ಶೇಟಕಾರ, ಶಿಕ್ಷಕರಾದ ಚಂದ್ರಕಾಂತ ನಿರ್ಮಳೆ, ಶಾಮ ಸುಂದರ ಖಾನಾಪೂರ, ನಾಗೇಂದ್ರಪ್ಪ ಗಾದಗೆ, ಅನೀಲಕುಮಾರ್ ಮಾಟೆ, ಮುಸ್ತಾಫ್ , ಪ್ರಶಾಂತಕುಮಾರ್ ಪಾಟೀಲ್ ಹಾಗೂ ಮಲ್ಲಿಕಾರ್ಜುನ್ ಟಂಕಸಾಲೆ ಅವರು ಮಕ್ಕಳ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.