ಬೀದರ್: ಅರಣ್ಯ ವಲಯದಲ್ಲಿ ಅಕ್ರಮವಾಗಿ ಭೂ ಸಾಗುವಳಿ ಮಾಡಿ ಗಾಂಜಾ ಬೆಳೆದಿದ್ದ ಆರೋಪಿಯೊಬ್ಬನನ್ನು ಅಬಕಾರಿ ಪೊಲೀಸರು ಬಂಧಿಸಿದ್ದು, ಆತನಿಂದ ಒಂದು ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆ ಜಪ್ತಿ ಮಾಡಿಕೊಂಡಿದ್ದಾರೆ.
ದೇವಿದಾಸ್ ಪವಾರ ಬಂಧಿತ ವ್ಯಕ್ತಿ. ಈತ ಜಿಲ್ಲೆಯ ಹುಮನಾಬಾದ್ ಅರಣ್ಯ ವಲಯ ವ್ಯಾಪ್ತಿಯ ಚಿಟಗುಪ್ಪ ತಾಲೂಕಿನ ಭದ್ರಾಪುರ್ ಗ್ರಾಮದಿಂದ ಎರಡು ಕಿಲೋ ಮೀಟರ್ ದೂರದ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮವಾಗಿ ಭೂ ಸಾಗುವಳಿ ಮಾಡಿ, ತೊಗರಿ ಬೆಳೆಯ ನಡುವೆ ಗಾಂಜಾ ಬೆಳೆದಿದ್ದನು.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಒಂದು ಲಕ್ಷ ರೂಪಾಯಿ ಮೌಲ್ಯದ 212 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಜಿಲ್ಲಾಧಿಕಾರಿ ಮಂಜುನಾಥ್ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಅನಿಲಕುಮಾರ್ ಪೊದ್ದಾರ್, ಸಿಪಿಐ ರವೀಂದ್ರ ಪಾಟೀಲ್, ಆನಂದ ಉಕ್ಕಲಿ, ರಾಜಶೇಖರ್, ದೇವಿದಾಸ್ ಭೋಸ್ಲೆ, ಪಿಎಸ್ ಐ ಜೇಟೆಪ್ಪಾ ಬೇಲೂರ್, ದುಂಡಪ್ಪ ಹಕ್ಕಿ ಹಾಗೂ ನಾನಾಗೌಡ ಕೇರುರ್ ಸೇರಿದಂತೆ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.