ಬೀದರ್: ಕಾರು ಚಾಲಕನೊಬ್ಬ ತನ್ನ ಮಾಲಿಕನಿಗೆ ಬರೋಬ್ಬರಿ 71 ಲಕ್ಷ ರೂಪಾಯಿ ವಂಚನೆ ಮಾಡಿ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನ ನಗರದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಒಟ್ಟು 53 ಲಕ್ಷ ರೂಪಾಯಿ ಜಪ್ತಿ ಮಾಡಿಕೊಂಡಿದ್ದಾರೆ.
ಬಳ್ಳಾರಿ ಮೂಲದ ರಾಜೇಶ ಬೆಳ್ಳಕ್ಕಿ ಎಂಬ ಉದ್ಯಮಿ ತನ್ನ ಕಾರು ಚಾಲಕನೊಂದಿಗೆ ಜಿಲ್ಲೆಯ ಮನ್ನಾಖೇಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಬಂದಿದ್ದ. ಈ ವೇಳೆ ಬಿತ್ತನೆ ಬೀಜ ಮಾರಾಟ ಮಾಡಿದ್ದ 71 ಲಕ್ಷ ರೂಪಾಯಿಯನ್ನ ತನ್ನ ಜತೆಯಲ್ಲಿ ಇಟ್ಟಕೊಂಡಿದ್ದ. ನಂತರ ಕಾರಿನಲ್ಲಿ ಹಣ ಇಟ್ಟು ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ್ದ. ಈ ವೇಳೆ ಕಾರು ಚಾಲಕ ಚಿತ್ರದುರ್ಗ ಜಿಲ್ಲೆಯ ತುರವನೂರು ಗ್ರಾಮದವನಾದ ಮಾರುತಿ ರವಿಸುಧಾ ಹಣ ಮತ್ತು ಕಾರು ಸಮೇತ ಪರಾರಿಯಾಗಿದ್ದ.
ಈ ಕುರಿತು ಮನ್ನಾಖೇಳ್ಳಿ ಪೊಲೀಸ್ ಠಾಣೆಯಲ್ಲಿ 10-06-2018ರಂದು ವಂಚನೆಗೊಳಗಾದ ರಾಜೇಶ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರು ತೆಲಂಗಾಣದ ಮೆಹಬೂಬ ನಗರ ಬಳಿಯ ಗುಡೆ ಬೆಳ್ಳೂರ ಗ್ರಾಮದಲ್ಲಿ ಆರೋಪಿ ಕಳೆದ ಎರಡು ವರ್ಷಗಳಿಂದ ವಾಸವಾಗಿರುವ ಮಾಹಿತಿ ಪಡೆದು ದಾಳಿ ನಡೆಸಿ ರವಿಸುಧಾನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ ಒಂದು ಬುಲೇರೋ ಕಾರು, ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೊಡ್, ಡಿವೈಎಸ್ಪಿ ಸೋಮಲಿಂಗ್ ಕುಂಬಾರ, ಸಿಪಿಐ ಶರಣಬಸವೇಶ್ವರ ಭಜಂತ್ರಿ, ಪಿಎಸ್ಐ ಗಳಾದ ಮಹಾಂತೇಶ ಲುಂಬಿ ಹಾಗೂ ಮಡಿವಾಳಪ್ಪ ಉಪಸ್ಥಿತರಿದ್ದರು.