ಬೀದರ್ : ಭೀಕರ ಬರಗಾಲದಿಂದ ಬೆಂದು ಹೋಗಿರುವ ಬಯಲು ಸೀಮೆಯ ಜಿಲ್ಲೆಯಲ್ಲಿ ಹಸಿರು ಕ್ರಾಂತಿಗೆ ಸರ್ಕಾರ ಚಿಂತನೆ ನಡೆಸಿದೆ.
ಮಾಂಜ್ರಾ ನದಿಗೆ ಅಡ್ಡಲಾಗಿ ಇನಷ್ಟು ಬ್ಯಾರೇಜ್ ನಿರ್ಮಾಣ ಮಾಡಿ ಅಲ್ಲಿಂದ ಕಾರಂಜಾ ಜಲಾಶಯಕ್ಕೆ ನೀರು ಹರಿಸಲು ಹಸಿರು ನಿಶಾನೆ ನೀಡಲಾಗಿದೆ. ನಗರ ಸೇರಿದಂತೆ ಬಸವಕಲ್ಯಾಣ, ಹುಮನಾಬಾದ್, ಭಾಲ್ಕಿ ಹಾಗೂ ಔರಾದ್ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಸರಬರಾಜಿಗೆ ಕ್ರಮಕೈಗೊಳ್ಳಲು ಯೋಜಿಸಲಾಗಿದೆ.
ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಈ ಮಹತ್ವಕಾಂಕ್ಷಿ ಯೋಜನೆ ಸರ್ವೆಗೆ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ. ಬಚಾವತ್ ಆಯೋಗದ ತೀರ್ಪಿನ ಅನ್ವಯ ಮಹಾರಾಷ್ಟ್ರ, ತೆಲಂಗಾಣ ಹಾಗೂ ರಾಜ್ಯದ ಪಾಲಿಗೆ ನೀಡಬೇಕಾದ 23.37 ಟಿಎಂಸಿ ನೀರು ಸಂಗ್ರಹಣೆಯಲ್ಲಿ ಕಾರಂಜಾ ಜಲಾಶಯಕ್ಕೆ 5 ಟಿಎಂಸಿ ನೀರು ಸಂಗ್ರಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.