ಬಸವಕಲ್ಯಾಣ : ನಗರದ ಐತಿಹಾಸಿಕ ತ್ರಿಪುರಾಂತ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿಯ ಯುವಕರು ಮನವಿ ಮಾಡಿದ್ದಾರೆ. ಯುವ ಮುಖಂಡ ಶಿವಕುಮಾರ್ ಬಿರಾದಾರ ನೇತೃತ್ವದಲ್ಲಿ ಮಿನಿ ವಿಧಾನಸೌಧದಲ್ಲಿನ ಸಹಾಯಕ ಆಯುಕ್ತರ ಕಚೇರಿಗೆ ತೆರಳಿದ ಯುವಕರ ನಿಯೋಗ, ಬೇಡಿಕೆ ಕುರಿತು ಸಹಾಯಕ ಆಯುಕ್ತ ಭುವನೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದೆ.
ನಗರದ ಹೃದಯ ಭಾಗದಲ್ಲಿರುವ 12ನೇ ಶತಮಾನದ ಶರಣರ ಕಾಲದ ಐತಿಹಾಸಿಕ ತ್ರಿಪುರಾಂತ ಕೆರೆಯಲ್ಲಿ ನೀರಿಲ್ಲದೆ ಬರಡಾಗಿದೆ. ಕೆರೆ ಖಾಲಿಯಾಗಿರುವ ಕಾರಣ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿದೆ. ನೀರು ಹರಿದು ಬರುವ ದಾರಿಗಳನ್ನು ಮುಚ್ಚಿರುವುದೇ ಕೆರೆ ಖಾಲಿಯಾಗಿ ಉಳಿಯಲು ಪ್ರಮುಖ ಕಾರಣ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಬಸವಾದಿ ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿನ ಶರಣ ಸ್ಮಾರಕಗಳ ವೀಕ್ಷಣೆ ಹಾಗೂ ಕೆರೆ ಪಕ್ಕದಲ್ಲಿರುವ ಐತಿಹಾಸಿಕ ಅನುಭವ ಮಂಟಪ, ಘನಲಿಂಗ ರುದ್ರಮುನಿ ಶಿವಾಚಾರ್ಯರ ಮಠಗಳಿದ್ದು, ಪ್ರತಿನಿತ್ಯ ನೂರಾರು ಜನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗರ ಆಕರ್ಷಣೆ ಮತ್ತು ಅಂತರ ಜಲಮಟ್ಟ ಸುಧಾರಣೆಗಾಗಿ ತ್ರಿಪುರಾಂತ ಕೆರೆಯಲ್ಲಿ ನೀರು ನಿಲ್ಲುವಂತೆ ಮಾಡುವುದು ಅತ್ಯವಶ್ಯಕ. ಕೆರೆಗೆ ನೀರು ಹರಿದು ಬರಲಿರುವ ಉಪ ಕಾಲುವೆಗಳನ್ನು ಸ್ವಚ್ಛಗೊಳಿಸಿ ನೀರಿಗೆ ದಾರಿ ಮಾಡಿಕೊಡುವ ಮೂಲಕ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಈ ವೇಳೆ ನಗರಸಭೆ ಮಾಜಿ ಸದಸ್ಯ ರವಿ ಕೊಳಕೂರ, ಸಂಜು ಮೇಟಗೆ, ಪ್ರಮುಖರಾದ ಮಹೇಶ ಬಾವುಗೆ, ಸಂತೋಷ ಸಣ್ಣುರೆ, ಶ್ರೀಷ್ ಸಾಗಾವೆ, ಸಿದ್ಧು ಭೋರ್ಗೆ, ಸಾಗರ ಶಾಶಟ್ಟೆ ಸೇರಿದಂತೆ ಪ್ರಮುಖರು ನಿಯೋಗದಲಿದ್ದರು.