ಬಸವಕಲ್ಯಾಣ: ತಾಲೂಕಿನ ಮುಸ್ತಾಪೂರ ಬಳಿ ಇರುವ ಚುಳಕಿನಾಲಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸುರಿದ ಅಧಿಕ ಮಳೆಯಿಂದಾಗಿ ಜಲಾಶಯ ಗರಿಷ್ಟ ಮಟ್ಟ ತಲುಪಿದೆ. ಒಳಹರಿವು ಹೆಚ್ಚುತ್ತಿರುವ ಕಾರಣ ಜಲಾಶಯದಿಂದ ಎರಡು ಗೇಟ್‌ಗಳ ಮೂಲಕ ನೀರು ಹರಿಬಿಡಲಾಗಿದೆ.
ಚುಳಕಿ ನಾಲ ಜಲಾಶಯದ ಗರಿಷ್ಠ ಮಟ್ಟ 592 ಮೀಟರ್ ಇದ್ದು, 0.938 ಟಿಎಂಸಿ ಸಾಮರ್ಥ್ಯವಿದೆ. ಜಲಾಶಯಕ್ಕೆ 195 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯ ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ ಶನಿವಾರ ಸಂಜೆಯಿಂದಲೇ ಒಳಹರಿವು ಇರುವ ಪ್ರಮಾಣದಷ್ಟೇ ಎರಡು ಗೇಟ್‌ಗಳ ಮೂಲಕ ನೀರು ನಾಲಾಕ್ಕೆ ಬಿಡಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಚುಳಕಿ ನಾಲಾ ಯೋಜನೆ ಭಾಲ್ಕಿ ವಿಭಾಗ -2 ಇಇ ವಿಲಾಸಕುಮಾರ ಮಾಶೆಟ್ಟೆ ತಿಳಿಸಿದ್ದಾರೆ.
ಒಳ ಹರಿವು ಹೆಚ್ಚಾದರೆ ಹೆಚ್ಚು ನೀರು ಬಿಡಲಾಗುತ್ತದೆ. ಹೀಗಾಗಿ ಜಲಾಶಯ ಪಾತ್ರದ ನಾಲಾ ತೀರದಲ್ಲಿರುವ ಗ್ರಾಮಸ್ಥರು ಎಚ್ಚರ ವಹಿಸಬೇಕು. ಜನ, ಜಾನುವಾರುಗಳು ಈ ವೇಳೆಯಲ್ಲಿ ನಾಲಾ ತೀರದತ್ತ ಬಿಡಬಾರದು. ಯಾವುದೇ ಕಾರಣಕ್ಕೂ ನಾಲಾದಲ್ಲಿ ಇಳಿಯಬಾರದು ಎಂದು ಕೋರಿದ್ದಾರೆ. ಜಲಾಶಯ ಭರ್ತಿಯಾಗಿದ್ದರಿಂದ ನಾಲಾಕ್ಕೆ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಾನಯನ ಪ್ರದೇಶಕ್ಕೆ ಭಾನುವಾರ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ವಸೀಮ್ ಪಟೇಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.