ಬೀದರ್: ಎಸಿ ರೂಮಿನ ಆಫೀಸ್ ಬಿಟ್ಟು ಗ್ರೌಂಡ್ ವರ್ಕ್ ಮಾಡಿ, ಜನರೊಂದಿಗೆ ಪ್ರೀತಿಯಿಂದ ಮಾತನಾಡಿ ಸಮಸ್ಯೆಗಳನ್ನ ಆನ್ ದಿ ಸ್ಪಾಟ್ ಬಗೆಹರಿಸಿ. ಇದೆಲ್ಲವೂ ಮಾಡಲಿಕ್ಕೆ ಆಗಲ್ಲ ಅನ್ನೋರು ಸಸ್ಪೆಂಡ್ ಆಗಲು ತಯಾರಾಗಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಖಡಕ್ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಮೈ ಚಳಿ ಬಿಡಿಸಿದ ಸಚಿವರು, ಆಡಳಿತ ವ್ಯವಸ್ಥೆ ಚುರುಕಾಗಿ ನಡೆಯುವಂತಾಗಲು ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಕಚೇರಿಗಳಿಗೆ ಆಗಾಗ ಅನಿರೀಕ್ಷಿತ ಭೇಟಿ ನೀಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಮೇಲಾಧಿಕಾರಿಗಳು ಸಮಯ ಪಾಲನೆ ಮಾಡಿದಲ್ಲಿ ತಮ್ಮ ಅಧೀನ ಅಧಿಕಾರಿ ಮತ್ತು ಸಿಬ್ಬಂದಿ ತಾವಾಗೇ ಸಮಯ ಪಾಲನೆ ಮಾಡುವರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಎಲ್ಲಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕನಿಷ್ಠ 15 ದಿನಕ್ಕೊಮ್ಮೆ ತಮ್ಮ ವ್ಯಾಪ್ತಿಯಲ್ಲಿನ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಚುರುಕು ಮುಟ್ಟಿಸುವುದರಿಂದ ಎಲ್ಲವೂ ಸರಿಯಾಗುತ್ತೆ ಎಂದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅನುಷ್ಠಾನ ಸರಿಯಾಗಿಲ್ಲ ಎನ್ನುವ ದೂರುಗಳಿವೆ. ಅದನ್ನು ಸರಿಪಡಿಸಬೇಕು. ಮಣ್ಣು ಪರೀಕ್ಷೆ ಯೋಜನೆಯ ಬಗ್ಗೆ ಎಲ್ಲ ರೈತರಿಗೆ ಮಾಹಿತಿ ಇಲ್ಲ. ಹೆಚ್ಚು ಪ್ರಚಾರ ಮಾಡಿ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸಬೇಕು ಎಂದರು.
ಕೆಲವು ಶಾಲೆಗಳಿಗೆ ಭೇಟಿ ನೀಡಿದಾಗ 1ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಕನ್ನಡವನ್ನೇ ಓದುವ ಸಾಮರ್ಥ್ಯ ಇಲ್ಲದಿರುವುದು ಕಂಡು ಬಂದಿದೆ. ತಾಲೂಕು ಹಂತದ ಅಧಿಕಾರಿಗಳು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟ ಸುಧಾರಿಸಲು ಪ್ರಯತ್ನಿಸಬೇಕು ಎಂದು ಸಚಿವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.