ಬೀದರ್: ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ದ ಜಾತ್ರೆಗಳಲ್ಲೊಂದಾದ ಶ್ರೀ ಕ್ಷೇತ್ರ ಹುಮನಾಬಾದ್ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಕಳೆಗಟ್ಟಿದೆ.
ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ಜಾತ್ರೆಯಲ್ಲಿ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿದಂತೆ ರಾಜ್ಯ ಹಾಗೂ ಪಕ್ಕದ ರಾಜ್ಯಗಳಿಂದ ಜನ ಸಾಗರವೇ ಹರಿದು ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಅಗ್ನಿ ಪ್ರವೇಶ, ಅಡ್ಡ ಪಲ್ಲಕ್ಕಿ, ಭಜನೆ, ಕಿರ್ತನೆ ಆರಾಧನೆ ಹಾಗೂ ರಥೋತ್ಸವ ನಡೆಯಲಿದೆ.
ಜಾತ್ರೆಗಾಗಿ ಆಗಮಿಸುವ ಭಕ್ತರ ಸ್ವಾಗತಕ್ಕಾಗಿ ಹುಮನಾಬಾದ್ ಪಟ್ಟಣ ಮಧುವಣಗಿತ್ತಿಯಂತೆ ಅಲಂಕೃತವಾಗಿದ್ದು, ಮುಂಜಾಗೃತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಬಾರಿ ಸಕಾಲಕ್ಕೆ ಮಳೆಯಾಗಿ ಜನರಿಗೆ ನೀರಿನ ಸಮಸ್ಯೆ ಇಲ್ಲವಾಗಿದೆ. ಸಂಕಟ ಬಂದಾಗಲೂ ಜನ ಬಂದಿದ್ದಾರೆ, ಈಗಲೂ ಬರ್ತಾರೆ. ದೇವರ ದರ್ಶನಕ್ಕಾಗಿ ಪಾರಂಪರಿಕವಾಗಿ ಭಕ್ತ ಸಮೂಹ ಹುಮನಾಬಾದ್ನತ್ತ ಆಗಮಿಸಲಿದೆ ಎಂದು ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹೇಳಿದ್ದಾರೆ.