ಬೀದರ್: ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಹಾಗೂ ಅನುದಾನಿತ ಶಾಲೆಯ ಶಿಕ್ಷಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಕಮಾಂಡೆಂಟ್ ಮನೋಜ್ ಕುಮಾರ್ ಶಾಲೆಯ ಅಧ್ಯಕ್ಷರ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಶಾಲೆಯ ಅಧ್ಯಕ್ಷ ಮಾಜಿ ಜಿ.ಪಂ ಸದಸ್ಯರಾದ ಅಮೃತರಾವ್ ಚಿಮಕೋಡ, ಕಮಾಂಡೆಂಟ್ ಆಗಿರುವ ಮನೋಜಕುಮಾರ್ ಅವರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತು ಮುಖ್ಯ ಶಿಕ್ಷಕರ ವಿರುದ್ಧ ಹಾಗೂ ಶಾಲೆ ಆಡಳಿತ ಮಂಡಳಿ ವಿರುದ್ಧ ಡೆತ್ ನೋಟ್ ಬರೆದಿಟ್ಟು ಮನೋಜ್ ಕುಮಾರ್ ವಿಷ ಸೇವಿಸಿದ್ದಾರೆ ಎನ್ನಲಾಗಿದೆ.
ಮಹಾತ್ಮ ಬೊಮ್ಮಗೊಂಡೇಶ್ವರ್ ಶಿಕ್ಷಣ ಸಂಸ್ಥೆಯಲ್ಲಿ ಸಹ ಶಿಕ್ಷಕರಾಗಿ ಮತ್ತು ಗೃಹ ರಕ್ಷಕ ದಳದ ಕಮಾಂಡೆಂಟ್ ಆಗಿರುವುದನ್ನು ಸಹಿಸಲಾಗದೇ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಶಾಲೆಯ ಅಧ್ಯಕ್ಷ ಅಮೃತವಾರ್ ಚಿಮಕೋಡ ವಿರುದ್ಧ ಮನೋಜ್ ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ.
ವಿಷ ಕುಡಿದು ಗಂಭೀರವಾಗಿ ಅಸ್ವಸ್ಥಗೊಂಡ ಕಮಾಂಡೆಂಟ್ ಮನೋಜ್ ಕುಮಾರ್ ಅವರನ್ನು ಬೀದರ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.